– ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ಟಿಎಂಸಿ ವಿಫಲ – ದೀದಿ ಸರ್ಕಾರಕ್ಕೆ ಪ್ರಧಾನಿ ಚಾಟಿ
ಕೋಲ್ಕತ್ತಾ: ಎರಡನೇ ಹಂತದ ಚುನಾವಣೆ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಿಎಂ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತಾಯಿ ಕಣ್ಣೀರಿಡುತ್ತಿದ್ದಾಳೆ, ರಾಜ್ಯವು ಒಳನುಸುಳುಕೋರರಿಂದ ತುಂಬಿದೆ, ಇಲ್ಲಿನ ಜನರು ಭಯಭೀತರಾಗಿದ್ದಾರೆಂದು ದೀದಿ ಆಡಳಿತವನ್ನು ಮೋದಿ ಟೀಕಿಸಿದರು.
ಬಂಗಾಳದಲ್ಲಿ (West Bengal) ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ತೃಣಮೂಲ ಕಾಂಗ್ರೆಸ್ (TMC) ವಿಫಲವಾಗಿದೆ. ಕೋಲ್ಕತ್ತಾದ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ಯುವ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ, ರಾಜ್ಯ ರಾಜಧಾನಿಯಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಕಾಮದುನಿಯಲ್ಲಿ 20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಹಲವಾರು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಮೋದಿ ಪಟ್ಟಿ ಮಾಡಿದರು. ಇದನ್ನೂ ಓದಿ: White House Dinner Shooting | ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ: ಮೋದಿ
ಬಂಗಾಳದ ಪ್ರತಿಯೊಬ್ಬ ಸಹೋದರಿ ಮತ್ತು ಮಗಳು ಈಗ ದಯೆಯಿಲ್ಲದ ತೃಣಮೂಲ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಮೊದಲ ಹಂತದ ಮತದಾನದಲ್ಲಿ ನಾವು ಇದರ ಒಂದು ನೋಟವನ್ನು ಕಂಡಿದ್ದೇವೆ. ಮಹಿಳಾ ಸಬಲೀಕರಣದಲ್ಲಿ ಮುಂಚೂಣಿಯಲ್ಲಿರುವ ಬಂಗಾಳವನ್ನು ತೃಣಮೂಲ ಪಕ್ಷವು ಕೆಳಮಟ್ಟಕ್ಕೆ ಇಳಿಸಿದೆ. ಪ್ರತಿದಿನ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗಳು ವರದಿಯಾಗುತ್ತಿವೆ. ಅವರ 15 ವರ್ಷಗಳ ಕಾನೂನುಬಾಹಿರ ಆಳ್ವಿಕೆಯಲ್ಲಿ, ಅನೇಕ ಅತ್ಯಾಚಾರ ಮತ್ತು ಕೊಲೆ ಘಟನೆಗಳು ಸಂಭವಿಸಿವೆ. ಆರ್‌ಜಿ ಕರ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ, ಕಸ್ಬಾ ಕಾನೂನು ಕಾಲೇಜಿನಲ್ಲಿ ಅತ್ಯಾಚಾರ, ಪಾರ್ಕ್ ಸ್ಟ್ರೀಟ್ ಸಾಮೂಹಿಕ ಅತ್ಯಾಚಾರ, ಹನ್ಸ್‌ಖಾಲಿ ಅತ್ಯಾಚಾರ ಮತ್ತು ಕೊಲೆ, ಕಾಮದುನಿ ಸಾಮೂಹಿಕ ಅತ್ಯಾಚಾರ, ದುರ್ಗಾಪುರ ವೈದ್ಯಕೀಯ ಕಾಲೇಜು ಅತ್ಯಾಚಾರ ಪ್ರಕರಣ ಹೀಗೆ ಹಲವು.. ಎಂದು ಮೋದಿ ಬೇಸರ ಹೊರಹಾಕಿದರು.
ಶಾಲಾ-ಕಾಲೇಜುಗಳಲ್ಲಿ ಅಪರಾಧ ಕೃತ್ಯಗಳು ನಡೆದಿವೆ. ಹೆಚ್ಚಿನ ಕೇಸ್‌ಗಳಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರೂ ಭಾಗಿಯಾಗಿದ್ದಾರೆ. ಈ ದಯೆಯಿಲ್ಲದ ಸರ್ಕಾರವು ಗೂಂಡಾಗಳನ್ನು ರಕ್ಷಿಸುತ್ತಿದೆ. ಹೆಣ್ಣುಮಕ್ಕಳನ್ನು ದೂಷಿಸುತ್ತಿದೆ ಎಂದು ಮೋದಿ ವಾಗ್ದಾಳಿ ನಡೆಸಿದರು.
ಬಂಗಾಳದಲ್ಲಿ ಮೊದಲ ಹಂತದಲ್ಲಿ ದಾಖಲೆಯ ಮತದಾನವಾಗಿದ್ದು, ಶೇ.91 ದಾಟಿದೆ. ಬಿಜೆಪಿ ಮತ್ತು ತೃಣಮೂಲ ಎರಡೂ ಪಕ್ಷಗಳು ತಮಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿಕೊಂಡಿವೆ. ಮುಂದಿನ ಹಂತದ ಮತದಾನ ಏಪ್ರಿಲ್ 29 ರಂದು ನಡೆಯಲಿದ್ದು, ಮತ ಎಣಿಕೆ ಮೇ 4 ರಂದು ನಡೆಯಲಿದೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ `ಶೀಷ್ ಮಹಲ್ 2′ ಆರೋಪ ಮಾಡಿದ ದೆಹಲಿ ಡಿಸಿಎಂ ಪರ್ವೇಶ್



