ಬೆಂಗಳೂರು: ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ MLC ನಜೀರ್ ಅಹ್ಮದ್‌ಗೆ (Naseer Ahmed) ಡೆಡ್‌ಲೈನ್ ನೀಡಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಇಂದು (ಏ.13) ಸಂಜೆಯೊಳಗೆ ರಾಜೀನಾಮೆ ನೀಡಬೇಕೆಂದು ಸೂಚಿಸಿದ್ದಾರೆ. ಒಂದು ವೇಳೆ ಸಂಜೆಯೊಳಗೆ ನಜೀರ್ ಅಹಮ್ಮದ್ ರಾಜೀನಾಮೆ ಕೊಡದಿದ್ದರೆ ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.ಇದನ್ನೂ ಓದಿ: ದಾವಣಗೆರೆಯಲ್ಲಿ ಪ್ರಚಾರಕ್ಕೆ ನಕಾರ – ಸಚಿವ ಜಮೀರ್ ಅಹ್ಮದ್ ಸೇರಿ ಮೂವರ ವಿರುದ್ಧ ಹೈಕಮಾಂಡ್‌ಗೆ ದೂರು
ಇದಕ್ಕೂ ಮುನ್ನ ಸಿಎಂ ಹೇಳಿದ್ದೇನು?
ನಿನ್ನೆಯಷ್ಟೇ ಎಕ್ಸ್ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿದ್ದ ಸಿಎಂ, ನನ್ನ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಇದುವರೆಗೆ ರಾಜಿನಾಮೆ ನೀಡಿಲ್ಲ. ಮುಂದೆ ನೀಡಬಹುದೇನೋ. ಕಾಂಗ್ರೆಸ್ ಪಕ್ಷ ಸೋಲನ್ನು ಒಪ್ಪಿಕೊಂಡಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಖಂಡಿತ. ತಲೆದಂಡಕ್ಕೆ ಚುನಾವಣೆಯ ಸೋಲು ಗೆಲುವು ಕಾರಣವಲ್ಲ. ನಸೀರ್ ಅಹ್ಮದ್ ಅವರು ಪಕ್ಷದ ಮುಖಂಡರು. ಅವರು ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಕೆಲವರ ಪಕ್ಷ ವಿರೋಧಿ ಕಾರ್ಯಗಳ ಬಗ್ಗೆ ಹೇಳಿಕೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಹೊರತು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರಾಜಿತವಾಗಲಿದೆ ಎಂದು ಅವರು ಹೇಳಿರುವುದಿಲ್ಲ. ಪಕ್ಷವಿರೋಧಿ ಚಟುವಟಿಕೆಗಳ ನಡುವೆಯೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ತಿಳಿಸಿದ್ದರು.
ಇದಕ್ಕೂ ಮುನ್ನ ಸುರ್ಜೇವಾಲಾ ಅವರು ಸಚಿವರಾದ ಜಮೀರ್ ಅಹಮದ್, ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹಮದ್ ವಿರುದ್ಧ ಎರಡು ಪುಟಗಳ ಸಂಪೂರ್ಣ ವರದಿ ಸಮೇತ ಹೈಕಮಾಂಡ್‌ಗೆ ದೂರು ಸಲ್ಲಿಸಿ, ಮೂವರ ವಿರುದ್ಧ ಕ್ರಮವಹಿಸುವಂತೆ ಉಲ್ಲೇಖಿಸಿದ್ದರು. ಈಗಾಗಲೇ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆಯನ್ನು ಕೊಟ್ಟಿದ್ದು, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.ಇದನ್ನೂ ಓದಿ: ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

