ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ (US-Iran) ನಡುವಿನ ಎರಡು ವಾರಗಳ ಕದನ ವಿರಾಮ ಜಾರಿಗೆ ಬಂದ ನಂತರ ಪಾಕಿಸ್ತಾನವು ಪ್ರಮುಖ ಮಧ್ಯವರ್ತಿ ಎಂದು ಮನ್ನಣೆ ಪಡೆದಿದೆ. ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರಿಗೆ ನೊಬೆಲ್ ಶಾಂತಿ (Nobel Peace Prize) ಪ್ರಶಸ್ತಿ ನೀಡಬೇಕೆಂದು ಪಾಕಿಸ್ತಾನ ಮತ್ತು ವಿದೇಶಗಳಲ್ಲಿ ಬೇಡಿಕೆ ವ್ಯಕ್ತವಾಗಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗಿನ ಸಂಭಾಷಣೆಗಳ ಆಧಾರದ ಮೇಲೆ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದೇನೆ ಎಂದು ಟ್ರಂಪ್ ಹೇಳಿದ್ದರು.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಪ್ರಧಾನಿ ಷರೀಫ್ ಅವರ ಮನವಿ ಮೇರೆಗೆ ಇರಾನ್ ಕದನ ವಿರಾಮವನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದ್ದರು. ಎರಡೂ ಕಡೆಯಿಂದ ಬಂದ ಆ ಮಾನ್ಯತೆಗೆ ಪಾಕಿಸ್ತಾನದಲ್ಲಿ ಶ್ಲಾಘನೆಗಳು ವ್ಯಕ್ತವಾಗುತ್ತಿವೆ. ಇದನ್ನೂ ಓದಿ: ಕದನ ವಿರಾಮ ಬೆನ್ನಲ್ಲೇ ಇರಾನ್‍ಗೆ ಶೂಟೌಟ್ ಎಚ್ಚರಿಕೆ ರವಾನಿಸಿದ ಟ್ರಂಪ್
ಕರಾಚಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಕೆಸಿಸಿಐ)ಯು ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಪ್ರಯತ್ನಗಳನ್ನು ಉಲ್ಲೇಖಿಸಿ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನಿ ಮಾಧ್ಯಮಗಳು ಈ ವಿಚಾರವನ್ನು ಬೆಂಬಲಿಸಿ ವ್ಯಾಪಕ ವರದಿಯನ್ನು ಪ್ರಕಟಿಸಿವೆ.
ಪಾಕಿಸ್ತಾನದ ಕೆಲವು ಕ್ಯಾಬಿನೆಟ್ ಮಂತ್ರಿಗಳು ಸಹ ಇದೇ ಭಾವನೆಯನ್ನು ಪ್ರತಿಧ್ವನಿಸಿದ್ದಾರೆ. ಪಾಕಿಸ್ತಾನ ನೊಬೆಲ್ ಶಾಂತಿ ಪ್ರಶಸ್ತಿಗೂ ಅರ್ಹವಾಗಿದೆ ಎಂದು ಐಟಿ ಸಚಿವೆ ಶಾಜಾ ಫಾತಿಮಾ ಹೇಳಿದ್ದಾರೆ.
ಪಾಕಿಸ್ತಾನದ ಹೊರಗಿನಿಂದಲೂ ಇದೇ ರೀತಿಯ ಧ್ವನಿಗಳು ಕೇಳಿಬಂದಿವೆ. ಇಟಲಿಯ ಮಾಜಿ ಪ್ರಧಾನಿ ಪಾವೊಲೊ ಜೆಂಟಿಲೋನಿ ಅವರು, ಕದನ ವಿರಾಮದಲ್ಲಿ ವಹಿಸಿದ ಪಾತ್ರಕ್ಕಾಗಿ ಪಾಕಿಸ್ತಾನವನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥನ ಸಹಾಯಕ ಮಟಾಶ್
ಯುದ್ಧದ ಮೂರನೇ ವಾರದಲ್ಲಿ ಪಾಕಿಸ್ತಾನ ತನ್ನ ಮಧ್ಯಸ್ಥಿಕೆ ಪ್ರಯತ್ನಗಳನ್ನು ಪ್ರಾರಂಭಿಸಿತು. ಮಾರ್ಚ್ 23 ರಂದು, ಅದು ಔಪಚಾರಿಕವಾಗಿ ಮಾತುಕತೆಗಳನ್ನು ಆಯೋಜಿಸಲು ಮುಂದಾಯಿತು. ಕೆಲವು ದಿನಗಳ ನಂತರ ವಿದೇಶಾಂಗ ಸಚಿವ ಇಶಾಕ್ ದಾರ್, ಅಮೆರಿಕವು ಪಾಕಿಸ್ತಾನದ ಮೂಲಕ ಇರಾನ್‌ನೊಂದಿಗೆ 15 ಅಂಶಗಳ ಪ್ರಸ್ತಾಪವನ್ನು ಹಂಚಿಕೊಂಡಿದೆ ಎಂದು ದೃಢಪಡಿಸಿದ್ದರು. ಹೇಳಿಕೆ ಬೆನ್ನಲ್ಲೇ ಮಂಗಳವಾರ ತಡರಾತ್ರಿ ಕದನ ವಿರಾಮ ಘೋಷಣೆಯಾಯಿತು. ಅಮೆರಿಕ ಮತ್ತು ಇರಾನ್ ನಡುವಿನ ಮುಂದಿನ ಸುತ್ತಿನ ಮಾತುಕತೆ ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ.

