ಕೋಲ್ಕತ್ತಾ: ಬಂಗಾಳದಲ್ಲಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ಮೂಲ ಉದ್ದೇಶ ಹಣ ಕಡಿತ, ಲೂಟಿ ಮಾಡುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಟೀಕಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಿ, ಡಬಲ್ ಎಂಜಿನ್ ಸರ್ಕಾರ ತನ್ನಿ ಎಂದು ಜನತೆಯಲ್ಲಿ ಮೋದಿ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ, ಪಶ್ಚಿಮ ಬಂಗಾಳಕ್ಕೆ (West Bengal) ಆರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.
ಪ್ರಧಾನಿಯನ್ನು ವಿರೋಧಿಸುವುದರಿಂದ ಬಂಗಾಳಕ್ಕೆ ಲಾಭವಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದಾಗ ನಿಜವಾದ ಪ್ರಗತಿ ಬರುತ್ತದೆ. ಏಕೆಂದರೆ ಅದು ಜನರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಅದಕ್ಕಾಗಿಯೇ ಬಂಗಾಳದಲ್ಲಿ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಬಹಳ ಮುಖ್ಯವಾಗಿದೆ. ಡಬಲ್ ಎಂಜಿನ್ ಸರ್ಕಾರವು ಬಂಗಾಳವನ್ನು ಮೀನುಗಾರಿಕೆ ಮತ್ತು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಹಲ್ದಿಯಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮೋದಿ ಮಾತನಾಡಿದ್ದಾರೆ. ಇದನ್ನೂ ಓದಿ: ಪಾಕ್ ಮಧ್ಯಸ್ಥಿಕೆ|ಭಾರತದ ರಾಜತಾಂತ್ರಿಕತೆಗೆ ದೊಡ್ಡ ಹಿನ್ನಡೆ: ಜೈರಾಮ್ ರಮೇಶ್
ಬಂಗಾಳದ ಜನತೆಗೆ ಮೋದಿ ಆರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಮೊದಲ ಗ್ಯಾರಂಟಿ ‘ಭಯದ ವಾತಾವರಣ’ವನ್ನು ಕೊನೆಗೊಳಿಸುವುದು ಎಂದಿದ್ದಾರೆ. ಟಿಎಂಸಿ ರಾಜ್ಯದಲ್ಲಿ ಭಯವನ್ನು ಹರಡುತ್ತಿದೆ. ಬಿಜೆಪಿ ಸರ್ಕಾರವು ಈ ಭಯದ ವಾತಾವರಣವನ್ನು ನಂಬಿಕೆಯಿಂದ ಬದಲಾಯಿಸುತ್ತದೆ ಎಂದು ಮೋದಿ ತಿಳಿಸಿದ್ದಾರೆ.
2ನೇ ಗ್ಯಾರಂಟಿ: ಬಿಜೆಪಿ ಸರ್ಕಾರದ ಅಡಿಯಲ್ಲಿ, ಸರ್ಕಾರಿ ವ್ಯವಸ್ಥೆಯು ಜನರಿಗೆ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ ಎಂದು ಮೋದಿ ಹೇಳಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲಾ ಫೈಲ್‌ಗಳನ್ನು ತನಿಖೆ ಮಾಡಲಾಗುವುದು ಎಂದಿದ್ದಾರೆ.
3ನೇ ಗ್ಯಾರಂಟಿ: ಹೆಣ್ಣುಮಕ್ಕಳ ವಿರುದ್ಧ ನಡೆದ ಪ್ರತಿಯೊಂದು ಹಗರಣ, ಭ್ರಷ್ಟಾಚಾರ ಮತ್ತು ಅನ್ಯಾಯಕ್ಕೆ ಸಂಬಂಧಿಸಿದ ಫೈಲ್‌ಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ. 4ನೇ ಗ್ಯಾರಂಟಿ: ಭ್ರಷ್ಟಾಚಾರದಲ್ಲಿ ಭಾಗಿಯಾದವರು ಯಾರೇ ಆಗಿರಲಿ, ಅವರು ಕಾನೂನಿನ ಮುಂದೆ ಬರುತ್ತಾರೆ. ಮಂತ್ರಿ ಅಥವಾ ಯಾರೇ ಆಗಿರಲಿ, ಅವರಿಗೆ ಜೈಲಲ್ಲಿ ಸ್ಥಾನ ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: RSS, BJP ಕಾರ್ಯಕರ್ತರನ್ನು ಕೊಲ್ಲಲು ಮುಸ್ಲಿಮರಿಗೆ ಮಲ್ಲಿಕಾರ್ಜುನ ಖರ್ಗೆ ಕರೆ ಆರೋಪ – ಬೆಂಗ್ಳೂರಲ್ಲಿ ದೂರು ದಾಖಲು
5ನೇ ಗ್ಯಾರಂಟಿ: ನಿರಾಶ್ರಿತರು ಸಂವಿಧಾನದ ಅಡಿಯಲ್ಲಿ ಎಲ್ಲಾ ಹಕ್ಕನ್ನು ಪಡೆಯುತ್ತಾರೆ. ಆದರೆ, ಒಳನುಸುಳುವವರನ್ನು ಹೊರಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ. 6ನೇ ಗ್ಯಾರಂಟಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ 7 ನೇ ವೇತನ ಆಯೋಗವನ್ನು ಜಾರಿಗೆ ತರುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ನೀವು (ಟಿಎಂಸಿ) ಬಂಗಾಳದ ಎಲ್ಲಾ ಸರ್ಕಾರಿ ನೌಕರರು ಮತ್ತು ಶಿಕ್ಷಕರನ್ನು ಹಲವು ವರ್ಷಗಳಿಂದ ಭಯದಲ್ಲಿ ಬದುಕುವಂತೆ ಮಾಡಿದ್ದೀರಿ. ಮೋದಿ ನೌಕರರ ಜೊತೆ ಇದ್ದಾರೆ. ‘ಕಮಲ’ ಚಿಹ್ನೆಯ ಬಟನ್ ಒತ್ತಿರಿ. ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ, ನಾವು 7 ನೇ ವೇತನ ಆಯೋಗವನ್ನು ಜಾರಿಗೆ ತರುತ್ತೇವೆ ಎಂದು ಮೋದಿ ಭರವಸೆ ನೀಡಿದ್ದಾರೆ.

