ಟೆಹ್ರಾನ್: ವಿಶ್ವದ ದೊಡ್ಡಣ್ಣ ಟ್ರಂಪ್ (Donald Trump) ಡೆಡ್‌ಲೈನ್‌ಗೆ ಇರಾನ್ ಕೂಡ ತನ್ನದೇ ದಾಟಿಯಲ್ಲಿ ಕೌಂಟರ್ ನೀಡಿದೆ. ಯುದ್ಧದಿಂದಾಗಿರುವ ನಷ್ಟ ಪರಿಹಾರವಿಲ್ಲದೇ ಹಾರ್ಮುಜ್ ಜಲಸಂಧಿ (Strait Of Hormuz) ತೆರೆಯುವ ಮಾತಿಲ್ಲ ಎಂದು ಅಮೆರಿಕಗೆ (America) ಇರಾನ್ ಹೊಸ ಕಂಡೀಷನ್ ಹಾಕಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಹೊಸ ಬೆದರಿಕೆ ಹಾಕಿದ್ದಾರೆ. ಒಪ್ಪಂದಕ್ಕೆ ಬನ್ನಿ ಅಥವಾ ಶರಣಾಗಿ. ಇಲ್ಲವಾದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಇರಾನ್ (Iran) ಹಿಂದೆ ಸರಿಯಲು ಸಿದ್ಧವಿಲ್ಲ. ಯುದ್ಧದಿಂದಾಗಿರುವ ನಷ್ಟ ತುಂಬಿಕೊಡುವಂತೆ ಷರತ್ತು ವಿಧಿಸುವ ಮೂಲಕ ಟ್ರಂಪ್ ನರಕ ದರ್ಶನದ ಎಚ್ಚರಿಕೆಗೆ ಇರಾನ್ ಪ್ರತ್ಯುತ್ತರ ನೀಡಿದೆ.
ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ 48 ಗಂಟೆಗಳ ಹೊಸ ಡೆಡ್‌ಲೈನ್ ನೀಡಿದ್ದು, ಮಂಗಳವಾರ ಮುಗಿಯಲಿದೆ. ಈ ನಡುವೆ ಹುಚ್ಚರೇ, ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ನೀವು ನರಕಕ್ಕೆ ಹೋಗುತ್ತೀರಿ ಎಂದು ಕಟು ಪದಗಳಲ್ಲಿ ಇರಾನ್ ನಾಯಕರನ್ನು ಟ್ರಂಪ್ ಎಚ್ಚರಿಸಿದ್ದಾರೆ. ಅಲ್ಲದೇ ಇಂದು ಟ್ರಂಪ್ ಸಾರ್ವಜನಿಕ ಭಾಷಣ ಮಾಡಲಿದ್ದು, ಇರಾನ್‌ಗೆ ಕಡೆಯ ಎಚ್ಚರಿಕೆ ನೀಡುವ ಸಾಧ್ಯತೆ ಇದೆ.
ಭಾನುವಾರ ಟ್ರೂಥ್ ಸೋಶಿಯಲ್ ಪೋಸ್ಟ್ ಮಾಡಿರುವ ಟ್ರಂಪ್, ಟೆಹ್ರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ, ಅಮೆರಿಕವು ಅದರ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ಮಾಡಬಹುದು ಮತ್ತು ಅದು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಹುಚ್ಚರೇ, ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ನೀವು ನರಕಕ್ಕೆ ಹೋಗುತ್ತೀರಿ. ಜಾಗರೂಕರಾಗಿರಿ. ಅಲ್ಲಾಹನಲ್ಲಿ ಪ್ರಾರ್ಥಿಸಿ ಎಂದು ಕಟುಪದಗಳಲ್ಲಿ ಎಚ್ಚರಿಸಿದ್ದಾರೆ.
ಈ ಎಚ್ಚರಿಕೆಗಳ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಎಫ್ -15 ಇ ಸಿಬ್ಬಂದಿಯನ್ನು ರಕ್ಷಿಸುವ ಕುರಿತು ಹೊಸ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಹಾರ್ಮುಜ್ ಜಲಸಂಧಿ ನಿಯಂತ್ರಣ ಹಾಗೂ ಕದನ ವಿರಾಮದ ನಂತರದ ದಾಳಿಯ ಬಗ್ಗೆ ಸುಳಿವು ನೀಡಲಿದ್ದಾರೆ.
ಮುಂದುವರಿದ ದಾಳಿ-ಪ್ರತಿದಾಳಿ:
ಇನ್ನು ಈ ನಡುವೆ ದಕ್ಷಿಣ ಇಸ್ರೇಲ್‌ನ ಡಿಮೋನಾ ಪ್ರದೇಶದ ಬಳಿಯ ಪೆಟ್ರೋಕೆಮಿಕಲ್ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ. ಡಿಮೋನಾ ಇಸ್ರೇಲ್‌ನ ಪ್ರಮುಖ ಪರಮಾಣು ಸೌಲಭ್ಯದ ಸ್ಥಳವಾಗಿದೆ. ಇದರ ಜೊತೆಗೆ ಕುವೈತ್‌ನ ಬುಬಿಯಾನ್ ದ್ವೀಪದಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳನ್ನು ಡ್ರೋನ್‌ಗಳ ಮೂಲಕ ಗುರಿಯಾಗಿಸಿಕೊಂಡಿರುವುದಾಗಿ ಇರಾನ್ ಹೇಳಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಪೆಟ್ರೋಕೆಮಿಕಲ್ ಸ್ಥಾವರದ ಮೇಲೆ ದಾಳಿ ನಡೆದ ನಂತರ ಬೆಂಕಿ ಕಾಣಿಸಿಕೊಂಡಿದೆ. ಬೊರೂಜ್ ಸ್ಥಾವರದಲ್ಲಿ ತಡೆಹಿಡಿಯುವ ಸಮಯದಲ್ಲಿ ಅವಶೇಷಗಳು ಬಿದ್ದಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಬುಧಾಬಿ ಅಧಿಕಾರಿಗಳು ತಿಳಿಸಿದ್ದಾರೆ. ಅಬುಧಾಬಿ ಮಾಧ್ಯಮ ಕಚೇರಿಯ ಪ್ರಕಾರ, ಹಾನಿಯನ್ನು ನಿರ್ಣಯಿಸುವವರೆಗೆ ಸ್ಥಾವರದಲ್ಲಿನ ಕಾರ್ಯಾಚರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಅದೃಷ್ಟವಶಾತ್, ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ.
ನೈಋತ್ಯ ಇರಾನ್‌ನ ವಿಮಾನ ನಿಲ್ದಾಣದ ಮೇಲೆ ಅಮೆರಿಕ-ಇಸ್ರೇಲ್ ದಾಳಿಗಳು ನಡೆದಿವೆ. ಇಸ್ರೇಲ್ ಗಡಿಯಿಂದ ದೂರದಲ್ಲಿರುವ ದಕ್ಷಿಣ ಲೆಬನಾನ್‌ನ ಕ್ಫರ್ ಹಟ್ಟಾ ಮೇಲೆ ಭಾನುವಾರ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಆರು ಜನರ ಕುಟುಂಬ ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ.
ಅಮೆರಿಕದ ದಾಳಿಗಳ ಬಗ್ಗೆ ಇರಾನ್ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಗರಿಕ ಮೂಲಸೌಕರ್ಯಕ್ಕೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಇರಾನ್ ಆರೋಪಿಸಿದೆ. ಅವರ ಹೇಳಿಕೆಗಳು ನಾಗರಿಕರನ್ನು ಭಯಭೀತಗೊಳಿಸಲು ನೇರ ಮತ್ತು ಸಾರ್ವಜನಿಕ ಪ್ರಚೋದನೆ ಮತ್ತು ಯುದ್ಧ ಅಪರಾಧ ಮಾಡುವ ಉದ್ದೇಶದ ಪುರಾವೆಯಾಗಿದೆ ಎಂದು ಆರೋಪಿಸಿದೆ.
ಒಟ್ಟಾರೆ ಇಂದು ಡೊನಾಲ್ಡ್ ಟ್ರಂಪ್ ಅವರ ಮಾತುಗಳ ಮೇಲೆ ಯುದ್ಧ ನಿರ್ಣಾಯಕವಾಗಲಿದ್ದು, ಮುಂಬರುವ ದಾಳಿಗಳ ಬಗ್ಗೆ ಸುಳಿವುಗಳು ಸಿಗಲಿದೆ.

