– ಬಾಂಗ್ಲಾ ಆಟಗಾರರ ಬ್ಯಾನ್ ಹಿಂದೆ ಸರ್ಕಾರದ ಪಾತ್ರ ಇಲ್ಲ: ಧುಮಾಲ್
ನವದೆಹಲಿ: 2026ರ ಐಪಿಎಲ್ (IPL 2026) ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್, ಬಾಂಗ್ಲಾದೇಶದ ಆಟಗಾರರಿಗೆ (Bangladeshi Players) ಮತ್ತೆ ಐಪಿಎಲ್ ಆಡುವ ಅವಕಾಶ ನೀಡುವುದಾಗಿ ಸುಳಿವು ಕೊಟ್ಟಿದ್ದಾರೆ.
ಹೌದು. 2026 ಐಪಿಎಲ್ಗೂ ಮುನ್ನ ಮುಸ್ತಾಫಿಜುರ್ ರೆಹಮಾನ್ (Mustafizur Rahman) ಎದುರಿಸಿದ ಸಮಸ್ಯೆಯನ್ನ ಬಾಂಗ್ಲಾದೇಶಿ ಆಟಗಾರರು ಎದಿರಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಮುಸ್ತಾಫಿಜುರ್ ರೆಹಮಾನ್ ಐಪಿಎಲ್ನಿಂದ ಹೊರಗುಳಿದಿದ್ದು ದುರದೃಷ್ಟಕರ, ಭವಿಷ್ಯದಲ್ಲಿ ಈ ಘಟನೆ ಪುನರಾವರ್ತನೆಯಾಗುವುದಿಲ್ಲ ಎಂದು ಖಚಿತವಾಗಿ ಹೇಳಿದ್ದಾರೆ.

ಸರ್ಕಾರದ ಪಾತ್ರ ಇಲ್ಲ
ಸಂದರ್ಶನವೊಂದರಲ್ಲಿ ಮಾತನಾಡಿದ ಧುಮಾಲ್ (Arun Dhumal), ಕೆಲವೊಂದು ಘಟನೆಗಳು ದುರಾದೃಷ್ಟಕರ ಎನಿಸುತ್ತವೆ. ಕೇಂದ್ರ ಸರ್ಕಾರ ಕ್ರಿಕೆಟ್ ವಿಷಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಅಥವಾ ಯಾವುದೇ ಪಾತ್ರವನ್ನೂ ವಹಿಸಲ್ಲ. ಕ್ರಿಕೆಟ್ಗೆ ಹೆಚ್ಚಿನ ಬೆಂಬಲ ನೀಡುತ್ತಲೇ ಬಂದಿದೆ. ಆದ್ರೆ ಕೆಲವೊಮ್ಮೆ ನಮ್ಮ ಸುತ್ತಲೂ ನಡೆಯುವ ಘಟನೆಗಳಿಂದ ಹೊಸ ನಿರ್ಧಾರಗಳು ಬರುತ್ತವೆ. ಒಳ್ಳೆಯ ಹಿತಾಸಕ್ತಿಗಳು ಮೇಲುಗೈ ಸಾಧಿಸುತ್ತವೆ. ಆದ್ರೆ 2026 ರ ಐಪಿಎಲ್ಗೂ ಸಂಭವಿಸಿದ ಘಟನೆ ಪುನರಾವರ್ತನೆಯಾಗುವುದಿಲ್ಲ ಅನ್ನೋದು ನನಗೆ ಖಚಿತವಾಗಿದೆ ಎಂದು ಹೇಳಿದ್ದಾರೆ.

ಐಪಿಎಲ್ನಿಂದ ಮುಸ್ತಾಫಿಜುರ್ ರೆಹಮಾನ್ ಬ್ಯಾನ್ ಆಗಿದ್ದೇಕೆ?
2026ರ ಐಪಿಎಲ್ ಟೂರ್ನಿಗಾಗಿ ಡಿಸೆಂಬರ್ನಲ್ಲಿ ನಡೆದ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನ ಕೆಕೆಆರ್ ಫ್ರಾಂಚೈಸಿಯು 9.20 ಕೋಟಿ ರೂ. ನೀಡಿ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬಾಂಗ್ಲಾ ಆಟಗಾರ ಎಂಬ ಹೆಗ್ಗಳಿಕೆಗೂ ಮುಸ್ತಾಫಿಜುರ್ ಪಾತ್ರವಾಗಿದ್ದರು. ಆದ್ರೆ ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹಾಳಾಗಿದೆ. ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದ ಕಾರಣ ಬಾಂಗ್ಲಾದೇಶದ ಆಟಗಾರರು ಐಪಿಎಲ್ನಲ್ಲಿ (IPL) ಆಡಬಾರದು ಎಂಬ ಆಕ್ರೋಶ ಕ್ರಿಕೆಟ್ ಅಭಿಮಾನಿಗಳಿಂದ ವ್ಯಕ್ತವಾಗಿತ್ತು. ಒತ್ತಡ ಜಾಸ್ತಿಯಾಗುತ್ತಿದ್ದಂತೆ ಬಿಸಿಸಿಐ ಮಧ್ಯಪ್ರವೇಶಿಸಿ ಮುಸ್ತಾಫಿಜುರ್ ರೆಹಮಾನ್ ಅವರನ್ನ ಕೆಕೆಆರ್ನಿಂದ ಕೈಬಿಡುವಂತೆ ಫ್ರಾಂಚೈಸಿಗೆ ಸೂಚಿಸಿತ್ತು.

ವಿಶ್ವಕಪ್ನಿಂದ ಬಾಂಗ್ಲಾ ತಂಡವೇ ಬ್ಯಾನ್
ರೆಹಮಾನ್ ಐಪಿಎಲ್ ಬ್ಯಾನ್ ಬಳಿಕ, ಬಾಂಗ್ಲಾ ಹೊಸ ಕ್ಯಾತೆ ಶುರು ಮಾಡಿತ್ತು. 2026 ರ ಟಿ20 ವಿಶ್ವಕಪ್ ಪಂದ್ಯಗಳನ್ನಾಡಲು ತನ್ನ ದೇಶದ ತಂಡವನ್ನು ಕಳುಹಿಸುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಅಕಾಡೆಮಿ ಹೇಳಿತು. ಕೊನೆಗೆ ಐಸಿಸಿ ಬಾಂಗ್ಲಾದೇಶ ತಂಡವನ್ನೇ ವಿಶ್ವಕಪ್ನಿಂದ ಹೊರದಬ್ಬಿತು. ಸ್ಕಾಟ್ಲೆಂಡ್ ತಂಡಕ್ಕೆ ವಿಶ್ವಕಪ್ ಆಡಲು ಅವಕಾಶ ಮಾಡಿಟ್ಟಿತ್ತು.

