– ಯುದ್ಧದ ಬಳಿಕ ರಷ್ಯಾದ ತೈಲ ಆಮದು ಶೇ.90 ರಷ್ಟು ಹೆಚ್ಚಳ
ಮಾಸ್ಕೋ/ನವದೆಹಲಿ: ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಪೂರ್ಣಪ್ರಮಾಣದಲ್ಲಿ ಇನ್ನೂ ಬಗೆಹರಿಯದ ಹಿನ್ನೆಲೆ ಭಾರತ (India), ರಷ್ಯಾದಿಂದ ತೈಲ (Russian Oil) ಖರೀದಿಯನ್ನ ಮುಂದುವರಿಸಿದೆ. ಈಗಾಗಲೇ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಭಾರತ ಸುಮಾರು 6 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು (Crude Oil) ರಷ್ಯಾದಿಂದ ಖರೀದಿಸಿದೆ. ಇದರ ಮಧ್ಯೆ ಆಪತ್ಭಾಂದವ ರಷ್ಯಾ ಭಾರತಕ್ಕೆ ಬೇಕಾದ ತೈಲ, ಎಲ್ಎನ್ಜಿ ಪೂರೈಕೆಗೆ ಉತ್ಪಾದನೆ ಜಾಸ್ತಿ ಮಾಡಲು ಸಿದ್ಧ ಎಂದು ಭರವಸೆ ನೀಡಿದೆ.
ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದ (Middle East War) ಇಂಧನ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆ ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲ ಮತ್ತು ಎಲ್ಎನ್ಜಿ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆಯನ್ನು ಹೆಚ್ಚಿಸಬಹುದು. ಪೂರೈಕೆಗೆ ಉತ್ಪಾದನೆ ಜಾಸ್ತಿ ಮಾಡಲು ಸಿದ್ಧ ಎಂದು ರಷ್ಯಾ ಹೇಳಿದೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಬಿಕ್ಕಟ್ಟು – ರಷ್ಯಾದಿಂದ ಮತ್ತೆ 6 ಕೋಟಿ ಬ್ಯಾರಲ್ ಕಚ್ಚಾ ತೈಲ ಖರೀದಿಸಿದ ಭಾರತ

ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ ರಷ್ಯಾದ ಉಪಾಧ್ಯಕ್ಷ ಡೆನಿಸ್ ಮಾಂಟುರೊವ್ (Denis Manturov), ಭಾರತದಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ರಷ್ಯಾದ ಕಂಪನಿಗಳು ಇಂಧನ ರಫ್ತುಗಳನ್ನು ಸ್ಥಿರವಾಗಿ ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ ಎಂದು ತಿಳಿಸಿದ್ದಾರೆ.
ಇನ್ನೂ ಭಾರತದಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಹೇಳಿಕೆಯ ಪ್ರಕಾರ, 2025 ರ ಅಂತ್ಯದ ವೇಳೆಗೆ ರಷ್ಯಾ ಭಾರತಕ್ಕೆ ಖನಿಜ ರಸಗೊಬ್ಬರಗಳ ಪೂರೈಕೆಯನ್ನು ಶೇ.40 ರಷ್ಟು ಹೆಚ್ಚಿಸಿದೆ. ಅದರಂತೆ ಭಾರತದ ಅವಶ್ಯಕತೆ ಪೂರೈಸುವುದನ್ನು ಮುಂದುವರಿಸಲು ಮಾಸ್ಕೋ ಸಿದ್ಧವಾಗಿದೆ ಎಂದು ಮಾಂಟುರೊವ್ ಹೇಳಿದ್ದಾರೆ. ಇದನ್ನೂ ಓದಿ: ಇರಾನ್ ಸಮುದ್ರ ಬಳಸದೇ ಹಾರ್ಮುಜ್ ಜಲಸಂಧಿ ಪ್ರವೇಶಿಸಿದ ಮೂರು ಒಮಾನ್ ಹಡಗುಗಳು

ರಷ್ಯಾದ ತೈಲ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ತೈಲ ಮತ್ತು ಎಲ್ಎನ್ಜಿ (ದ್ರವೀಕೃತ ನೈಸರ್ಗಿಕ ಅನಿಲ) ಸರಬರಾಜನ್ನು ಪೂರೈಸಲು ಉತ್ಪಾದನೆ ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ. ಪರಮಾಣು ಶಕ್ತಿಯಲ್ಲಿ ತಮ್ಮ ಪಾಲುದಾರಿಕೆ ಬಲಪಡಿಸುವುದನ್ನೂ ಉಭಯ ರಾಷ್ಟ್ರಗಳು ಮುಂದುವರಿಸುತ್ತವೆ. ಜೊತೆಗೆ ಒಪ್ಪಿತ ಅವಧಿಗೆ ಅನುಗುಣವಾಗಿ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರಕ್ಕೆ ವಿದ್ಯುತ್ ಘಟಕಗಳನ್ನು ನಿರ್ಮಿಸುವ ಯೋಜನೆಯನ್ನು ಕಾರ್ಯಗತಗೊಳಿಸಲಿದೆ ಎಂದು ಇರಾನ್ ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನೂ ಯೂರಿಯಾ ಉತ್ಪಾದನೆಗಾಗಿ ಜಂಟಿ ಯೋಜನೆಯು ಅಭಿವೃದ್ಧಿ ಹಂತದಲ್ಲಿರುವುದನ್ನು ಗಮನಿಸಿದ ಮಂಟುರೊವ್, ಇದು ಎರಡೂ ರಾಷ್ಟ್ರಗಳ ನಡುವಿನ ದೀರ್ಘಕಾಲೀನ ಕೃಷಿ ಸಹಕಾರವನ್ನ ಬೆಂಬಲಿಸುವ ನಿರೀಕ್ಷೆಯಿದೆ ಎಂದು ಪುನರುಚ್ಚರಿಸಿದರು. ಇದನ್ನೂ ಓದಿ: ಭಾರತದತ್ತ ಹೊರಟಿದ್ದ ಇರಾನ್ ಕಚ್ಚಾ ತೈಲ ಹೊತ್ತ ಹಡಗು ಚೀನಾದತ್ತ ಪ್ರಯಾಣ
90% ತೈಲ ಆಮದು ಹೆಚ್ಚಳ
ಇನ್ನೂ ಹಾರ್ಮುಜ್ ಬಿಕ್ಕಟ್ಟಿನ ನಂತರ, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಹೆಚ್ಚಿಸುತ್ತಲೇ ಇದೆ. ಫೆಬ್ರವರಿಗಿಂತ ಮಾರ್ಚ್ ತಿಂಗಳ ಅವಧಿಯಲ್ಲಿ ತೈಲ ಖರೀದಿ ಹೆಚ್ಚಳವನ್ನು ಶೇ.90 ರಷ್ಟಯ ಹೆಚ್ಚಿಸಿದೆ ಎಂದು ವರದಿಗಳು ತಿಳಿಸಿವೆ.

