ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ 5943 ಗ್ರಾಮ ಪಂಚಾಯತಿಗಳ ತೆರಿಗೆ ಸಂಗ್ರಹಿಸಿದೆ. ಈ ವರ್ಷ ಕಳೆದ ಸಾಲಿಗಿಂತ ಹೆಚ್ಚಿನ ತೆರಿಗೆ ಸಂಗ್ರಹ ಮತ್ತು ಕಂದಾಯ ಕ್ರೋಡೀಕರಣ ಮಾಡುವ ಮೂಲಕ ಸತತವಾಗಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ತೆರಿಗೆ ಸಂಗ್ರಹ ಮತ್ತು ಕಂದಾಯ ಕ್ರೋಢೀಕರಣದಲ್ಲಿ ಕರ್ನಾಟಕ ರಾಜ್ಯವು ಕಳೆದ ವರ್ಷ ಅತ್ಯುತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮೊದಲ ಸ್ಥಾನವನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹಣೆಯಲ್ಲಿ ಉಂಟಾಗಿರುವ ಪ್ರಗತಿಯು ದಕ್ಷ ಆಡಳಿತ, ನಿಯಮಾವಳಿಗಳ ಕಟ್ಟುನಿಟ್ಟಿನ ಜಾರಿ ಮತ್ತು ಸುಧಾರಿತ ತೆರಿಗೆ ಸಂಗ್ರಹಣಾ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ ಎಂಬ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೇಸಿಗೆಯ ದಟ್ಟಣೆ ನಿರ್ವಹಣೆ; ಬೆಂಗಳೂರು ಕಂಟೋನ್ಮೆಂಟ್-ಚೆನ್ನೈ ನಡುವೆ ವಿಶೇಷ ರೈಲು ಸಂಚಾರ

2024-25ನೇ ಆರ್ಥಿಕ ವರ್ಷದಲ್ಲಿ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳು 1272.54 ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಮೂಲಕ ಚಾಲ್ತಿ ಬೇಡಿಕೆಯ ಶೇ.80ರಷ್ಟು ತೆರಿಗೆ ವಸೂಲಿ ಮಾಡಿ ದಾಖಲೆ ಮಾಡಿತ್ತು. 2025-26ನೇ ಸಾಲಿನಲ್ಲಿ 1382.57 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದ್ದು, 2024-25ನೇ ಸಾಲಿಗಿಂತ 110.04 ಕೋಟಿ ರೂ. ಅಧಿಕ ತೆರಿಗೆ ವಸೂಲಿ ಮಾಡಿದಂತಾಗಿದೆ. ಆ ಮೂಲಕ ಚಾಲ್ತಿ ಸಾಲಿನ ಬೇಡಿಕೆಯ ಶೇ.89 ರಷ್ಟು ದಾಖಲೆಯ ತೆರಿಗೆ ಸಂಗ್ರಹಿಸಲಾಗಿದೆ ಎಂಬ ವಿವರಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹ ಕುರಿತು ವ್ಯಾಪಕ ಪ್ರಚಾರ ಕಾರ್ಯಕ್ರಮಗಳು, ತೆರಿಗೆ ವಸೂಲಾತಿ ಅಭಿಯಾನಗಳ ಮೂಲಕ ನಿರಂತರ ಶ್ರಮ ವಹಿಸುವ ಮೂಲಕ ತೆರಿಗೆ ಸಂಗ್ರಹದಲ್ಲಿ ದಾಖಲೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ಗಳಿಂದ ಆರಂಭಿಸಿ ಎಲ್ಲಾ ಅಧಿಕಾರಿಗಳ ಶ್ರಮದಿಂದ ಈ ಫಲಿತಾಂಶ ಸಾದ್ಯವಾಗಿದೆ ಎಂದು ಹೇಳಿರುವ ಸಚಿವರು ನೌಕರರು ಹಾಗೂ ಅಧಿಕಾರಿಗಳ ವೃಂದವನ್ನು ಅಭಿನಂದಿಸಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ಮೂರು ವರ್ಷಗಳಿಂದ ಕರ ಸಂಗ್ರಹಣೆಯಲ್ಲಿ ಏರುಮುಖ ಕಾಣಬಹುದಾಗಿದೆ. ಸಂಗ್ರಹವಾದ ಪ್ರತಿಯೊಂದು ರೂಪಾಯಿಯೂ ಹಳ್ಳಿಗಳಲ್ಲಿನ ಸಾರ್ವಜನಿಕ ಕಾಮಗಾರಿಗಳು, ಉತ್ತಮ ಸೇವೆಗಳು ಮತ್ತು ಸ್ಥಳೀಯ ಅಭಿವೃದ್ಧಿಗಾಗಿ ಮರಳಿ ವಿನಿಯೋಗವಾಗುತ್ತಿದೆ. ಇದು ಗ್ರಾಮೀಣ ಭಾಗದ ಸರ್ವತೋಮುಖ ಪ್ರಗತಿಗೆ ನಾಂದಿಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹುಚ್ಚುರಾಯಸ್ವಾಮಿ ರಥೋತ್ಸವದಲ್ಲಿ ಭಾಗಿಯಾದ ಬಿಎಸ್ವೈ ಕುಟುಂಬ
ರಾಯಚೂರು ಜಿಲ್ಲೆ ಶೇ.129ರಷ್ಟು ತೆರಿಗೆ ಸಂಗ್ರಹಿಸುವ ಮೂಲಕ ವಿಕ್ರಮ ಸಾಧಿಸಿದೆ. ರಾಜ್ಯದ 11 ಜಿಲ್ಲೆಗಳು ಶೇ.100ಕ್ಕಿಂತಲೂ ಹೆಚ್ಚು ಕರ ಸಂಗ್ರಹಿಸುವ ಮೂಲಕ ತೆರಿಗೆ ಸಂಗ್ರಹಣೆಯಲ್ಲಿ ಮುನ್ನಡೆ ಸಾಧಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

