ಫ್ಲೋರಿಡಾ: ಯುದ್ಧದ ಮಧ್ಯೆ ಮಾನವಸಹಿತ ಚಂದ್ರಯಾನದ ಐತಿಹಾಸಿಕ ಕ್ಷಣಕ್ಕೆ ಅಮೆರಿಕದ ನಾಸಾ(NASA) ಸಜ್ಜಾಗಿದೆ. ಆರ್ಟೆಮಿಸ್-2(Artemis II) ಮಿಷನ್ ಮೂಲಕ 50 ವರ್ಷಗಳ ಬಳಿಕ ಚಂದಿರನ (Lunar) ಅನ್ವೇಷಣೆಗೆ ನಾಸಾ ಸರ್ವ ಸನ್ನದ್ಧವಾಗಿದೆ.
ಅಮೆರಿಕದ(USA) ಕಾಲಮಾನದ ಪ್ರಕಾರ ಸಂಜೆ 6:24ಕ್ಕೆ (ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ3:54) ನಾಲ್ವರು ಗಗನಯಾನಿಗಳಿದ್ದ ನೌಕೆ ಉಡಾವಣೆ ಆಗಲಿದೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಲಾಂಚಿಂಗ್ ಪ್ಯಾಡ್ 39ಬಿ ಇಂದ ನಾಸಾದ ಅತ್ಯಂತ ಶಕ್ತಿಶಾಲಿ ಎಸ್‌ಎಲ್‌ಎಸ್ ರಾಕೆಟ್-ಓರಾಯನ್ ನೌಕೆಯನ್ನು (Orion Capsule) ಹೊತ್ತು ನಭಕ್ಕೆ ಚಿಮ್ಮಲಿದೆ.
1972ರ ಅಪೋಲೋ 17ರ ಮಿಷನ್ ನಂತರ ಮಾನವಸಹಿತ ನೌಕೆಯೊಂದು ಚಂದ್ರನ ಕಕ್ಷೆಗೆ ಹೋಗ್ತಿರೋದು ಇದೇ ಮೊದಲು. 2028ರ ಹೊತ್ತಿಗೆ ಮಾನವನನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಕನಸು ನನಸಾಗಿಸಲು ನಾಸಾ ಯತ್ನಿಸ್ತಿದೆ.

ನಾಸಾ ಆರ್ಟೆಮಿಸ್ 1, 2, 3 ಅಂತ ಮಿಷನ್ ಮಾಡುತ್ತಿದ್ದು ಆರ್ಟೆಮಿಸ್ 1ರಲ್ಲಿ ಎಸ್‌ಎಸ್‌ಎಲ್ ರಾಕೆಟ್ ಉಡಾವಣೆಯಲ್ಲಿ ಯಶಸ್ವಿಯಾಗಿದೆ. ಈಗ ಆರ್ಟೆಮಿಸ್-2ನಲ್ಲಿ ಓರಾಯನ್ ನೌಕೆಯನ್ನು ಹೊತ್ತೊಯ್ಯುವುದರ ಪರೀಕ್ಷೆ ಆಗ್ತಿದೆ. ಇದರಲ್ಲಿ ಬಾಹ್ಯಾಕಾಶ ತೀವ್ರ ವಿಕಿರಣ ತಡೆದುಕೊಳ್ಳುವುದು, ಗಗನಯಾತ್ರಿಗಳ ಉಸಿರಾಟ, ಊಟ, ಸುರಕ್ಷತೆ, ವಾಪಸ್ ಬರುವ ಬಗ್ಗೆ ಖಚಿತ ಪಡಿಸಿಕೊಳ್ಳಲಿದೆ. ಈ ಮೂಲಕ ಮಾನವ ಅಲ್ಲಿ ಬದುಕಬಹುದೇ ಅನ್ನೋದನ್ನು ಖಚಿತಪಡಿಸಿಕೊಳ್ಳಲಿದ್ದಾರೆ.
ಈ ಮಿಷನ್‌ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕರೆ, ಆರ್ಟೆಮಿಸ್ 3 ಮಿಷನ್ ಶುರುವಾಗಲಿದೆ. ಇದರಿಂದ ಮಾನವರು ಚಂದಿರನ ಮೇಲೆ ಇಳಿಯಲು ಯತ್ನ ನಡೆಯಲಿದೆ. ಜೊತೆಗೆ ಚಂದಿರನನ್ನು ಟ್ರೈನಿಂಗ್ ಕ್ಯಾಂಪ್ ರೀತಿ ಬಳಸಿ, ಮಂಗಳ ಅಥವಾ ಬೇರೆ ಗ್ರಹಗಳಿಗೆ ಪಯಣಿಸಲು ಅನುಕೂಲ ಆಗಬಹುದು ಎಂಬ ಅಂದಾಜು ವಿಜ್ಞಾನಿಗಳದ್ದಾಗಿದೆ.
ಈ 10 ದಿನಗಳ ಕಾಲ ಪಯಯದಲ್ಲಿ ಚಂದ್ರನ ಮೇಲೆ ನಾಲ್ವರು ಗಗನಯಾತ್ರಿಗಳು ಇಳಿಯುವುದಿಲ್ಲ. ಚಂದಿರನಿಂದ 7,400 ಕಿ.ಮೀ ದೂರದಲ್ಲಿ ಸುತ್ತಾಡುತ್ತಾರೆ. 6,85,000 ಮೈಲುಗಳಷ್ಟು ಪ್ರಯಾಣ ಮಾಡಿ ಭೂಮಿಗೆ ವಾಪಸ್ ಆಗಲಿದ್ದಾರೆ. ಇದನ್ನೂ ಓದಿ: ಆರ್ಟೆಮಿಸ್-2 ಪಯಣ– ಉಡಾವಣೆಗೂ ಮುನ್ನ ಸೂರ್ಯನ ಮೇಲೆ ನಾಸಾ ಕಣ್ಣಿಟ್ಟಿದ್ದು ಯಾಕೆ? ಮಿಷನ್ ಉದ್ದೇಶ ಏನು?
ಇಷ್ಟೊಂದು ಪ್ರಾಮುಖ್ಯತೆ ಯಾಕೆ?
1972ರಲ್ಲಿ ನಡೆದ ಅಪೊಲೊ 17 ಮಿಷನ್ ನಂತರ 54 ವರ್ಷಗಳ ಬಳಿಕ ಮಾನವಸಹಿತ ನೌಕೆ ಚಂದ್ರನತ್ತ ಪಯಣಸುತ್ತಿರುವುದರಿಂದ ಕುತೂಹಲ ಹೆಚ್ಚಾಗಿದೆ. ಚಂದ್ರನ ಮೇಲೆ ಸಂಶೋಧನೆ ನಡೆಸುವ ಮೂಲಕ ಮುಂದಿನ ದಿನಗಳಲ್ಲಿ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸಲು ಬೇಕಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ನಾಸಾ ಹಾಕಿಕೊಂಡಿದೆ.
ಗಗನಯಾತ್ರಿಗಳೊಂದಿಗೆ ಒರಾಯನ್ (Orion) ನೌಕೆಯು ಬಾಹ್ಯಾಕಾಶದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅಲ್ಲಿನ ವಿಕಿರಣಗಳನ್ನು ಹೇಗೆ ತಡೆದುಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸುವುದು ಈ ಮಿಷನ್‌ನ ಗುರಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಮಾನವರನ್ನು ಇಳಿಸುವ ಆರ್ಟೆಮಿಸ್-3 (Artemis III) ಯೋಜನೆಗೆ ಸಹಾಯವಾಗಲಿದೆ.

ರಾಕೆಟ್ ವಿಶೇಷತೆ ಏನು?
ಉಡಾವಣಾ ಸಮಯದಲ್ಲಿ ಇಂಧನವನ್ನು ಪೂರ್ಣವಾಗಿ ತುಂಬಿದಾಗ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ಸುಮಾರು 26 ಲಕ್ಷ ಕೆಜಿ (2.6 ಮಿಲಿಯನ್ ಕೆಜಿ) ತೂಕವಿರುತ್ತದೆ. ಇಂಧನ ಇಲ್ಲದೇ ಇದ್ದಾಗ ಕೇವಲ ರಾಕೆಟ್ ಮತ್ತು ಒರಾಯನ್ ಕ್ಯಾಪ್ಸುಲ್‌ನ ತೂಕ ಸುಮಾರು 16 ಲಕ್ಷ ಕೆಜಿ ಇರುತ್ತದೆ. ಇದು ಸುಮಾರು 27,000 ಕೆಜಿ ತೂಕವನ್ನು ಚಂದ್ರನ ಕಕ್ಷೆಯವರೆಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.
ಈ ಬೃಹತ್ ರಾಕೆಟ್ ಅನ್ನು ಉಡಾವಣಾ ಸ್ಥಳಕ್ಕೆ ಸಾಗಿಸಲು ಸುಮಾರು 95 ಲಕ್ಷ ಕೆಜಿ ಭಾರ ಹೊರುವ ಸಾಮರ್ಥ್ಯವಿರುವ ‘ಕ್ರಾಲರ್-ಟ್ರಾನ್ಸ್‌ಪೋರ್ಟರ್’ ಎಂಬ ವಿಶೇಷ ವಾಹನವನ್ನು ಬಳಸಲಾಗುತ್ತದೆ. ಎಸ್‌ಎಲ್‌ಎಸ್ ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಪ್ರಸಿದ್ಧಿ ಪಡೆದಿದೆ. 2022ರಲ್ಲಿ ನಡೆದ ಆರ್ಟೆಮಿಸ್-1 (Artemis I) ಯಶಸ್ವಿ ಉಡಾವಣೆಯಲ್ಲಿ ಈ ರಾಕೆಟ್ ಅನ್ನು ಬಳಸಲಾಗಿತ್ತು.
ತಂಡದಲ್ಲಿ ಯಾರಿದ್ದಾರೆ?
ರೀಡ್ ವೈಸ್‌ಮನ್ (Reid Wiseman): ಮಿಷನ್ ಕಮಾಂಡರ್.
ವಿಕ್ಟರ್ ಗ್ಲೋವರ್ (Victor Glover): ಪೈಲಟ್ (ಚಂದ್ರನತ್ತ ಪ್ರಯಾಣಿಸುವ ಮೊದಲ ಕಪ್ಪು ವರ್ಣೀಯ ವ್ಯಕ್ತಿ).
ಕ್ರಿಸ್ಟಿನಾ ಕೋಚ್ (Christina Koch): ಮಿಷನ್ ಸ್ಪೆಷಲಿಸ್ಟ್ (ಚಂದ್ರನತ್ತ ಪ್ರಯಾಣಿಸುವ ಮೊದಲ ಮಹಿಳೆ).
ಜೆರೆಮಿ ಹ್ಯಾನ್ಸನ್ (Jeremy Hansen): ಮಿಷನ್ ಸ್ಪೆಷಲಿಸ್ಟ್ (ಕೆನಡಾ ಬಾಹ್ಯಾಕಾಶ ಸಂಸ್ಥೆ)

