ನವದೆಹಲಿ: ಮಧ್ಯಪ್ರಾಚ್ಯದಲ್ಲಿ(Middle East War) ನಡೆಯುತ್ತಿರುವ ಯುದ್ಧದಿಂದ ದಿನೇ ದಿನೇ ಡಾಲರ್ ಮುಂದೆ ಪಲ್ಟಿಯಾಗುತ್ತಿರುವ ರೂಪಾಯಿ ಮೌಲ್ಯವನ್ನು (Rupee Value) ವೃದ್ಧಿಸಲು ಆರ್ಬಿಐ (RBI) ಮಧ್ಯಪ್ರವೇಶ ಮಾಡಿದರೂ ಮತ್ತೆ ಕುಸಿದಿದೆ. ಇದೇ ಮೊದಲ ಬಾರಿಗೆ 1 ಡಾಲರ್ (Dollar) ಮೌಲ್ಯ 95 ರೂ.ಗಳ ಗಡಿಯನ್ನು ದಾಟಿದೆ.
ಕಳೆದ ಶುಕ್ರವಾರ(ಮಾ.27) ಎಲ್ಲಾ ಬ್ಯಾಂಕುಗಳು (Bank) ಪ್ರತಿ ವ್ಯವಹಾರದ ದಿನದ ಅಂತ್ಯಕ್ಕೆ ತಮ್ಮ Net Open Position in Rupee – NOP-INR ಗರಿಷ್ಠ 100 ಮಿಲಿಯನ್ ಡಾಲರ್ಗೆ ಮಿತಿಗೊಳಿಸಬೇಕು ಎಂದು ನಿರ್ದೇಶನ ನೀಡಿದೆ. ಈ ಹೊಸ ನಿಯಮವನ್ನು ಪಾಲಿಸಲು ಬ್ಯಾಂಕ್ಗಳಿಗೆ ಏಪ್ರಿಲ್ 10 ರವರೆಗೆ ಗಡುವು ನೀಡಲಾಗಿದೆ.
ಏರಿಕೆಯಾಗಿ ಕುಸಿದ ರೂಪಾಯಿ:
ಆರ್ಬಿಐ ಈ ನಿರ್ಧಾರದ ಬೆನ್ನಲ್ಲೇ ರೂಪಾಯಿ ಮೌಲ್ಯ ಇಂದು ಬೆಳಗ್ಗೆ ಸುಮಾರು 1 ರೂಪಾಯಿ 30 ಪೈಸೆ ಏರಿಕೆಯಾಗಿ 93.59 ಕ್ಕೆ ತಲುಪಿತ್ತು. ಬೆಳಗ್ಗೆ ಏರಿಕೆಯಾಗಿದ್ದರೆ ನಂತರ ರೂಪಾಯಿ ಮೌಲ್ಯ ಕುಸಿಯಲು ಆರಂಭವಾಯಿತು. ಮಧ್ಯಾಹ್ನ 3 ಗಂಟೆಯ ವೇಳೆಗೆ 1 ಡಾಲರ್ ಮುಂದೆ 95.13 ರೂ.ನಲ್ಲಿ ವ್ಯವಹಾರ ನಡೆಸುತ್ತಿತ್ತು. ಡಾಲರ್ ಮುಂದೆ ರೂಪಾಯಿ ಮೌಲ್ಯ 95 ಡಾಲರ್ಗೆ ಕುಸಿದಿರುವುದು ಇದೇ ಮೊದಲು. ಇದನ್ನೂ ಓದಿ: ಕುವೈತ್ ಮೇಲೆ ಇರಾನ್ ದಾಳಿ – ವಿದ್ಯುತ್ ಸ್ಥಾವರದಲ್ಲಿದ್ದ ಭಾರತೀಯ ಕಾರ್ಮಿಕ ಸಾವು

ಆರ್ಬಿಐ ಕೈಗೊಂಡ ಕ್ರಮ ಏನು?
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬ್ಯಾಂಕ್ಗಳು ಊಹಾಪೋಹದ ವಹಿವಾಟು ನಡೆಯುತ್ತಿರುತ್ತದೆ. ರೂಪಾಯಿ ಮೌಲ್ಯದ ಮೇಲೆ ನಡೆಯುವ ಊಹಾಪೋಹದ ವಹಿವಾಟುಗಳಿಗೆ (Speculation) ಕಡಿವಾಣ ಹಾಕಲಾಗಿದೆ.
ಈ ಮೊದಲು ಬ್ಯಾಂಕ್ಗಳ ಮಂಡಳಿಗಳೇ ತಮ್ಮ ಬಂಡವಾಳದ 25% ವರೆಗೆ ಈ ಮಿತಿಯನ್ನು ನಿಗದಿಪಡಿಸಿಕೊಳ್ಳಲು ಅವಕಾಶವಿತ್ತು. ಇದರಿಂದ ದೊಡ್ಡ ಬ್ಯಾಂಕ್ಗಳು ಶತಕೋಟಿ ಡಾಲರ್ಗಳವರೆಗೆ ವಹಿವಾಟು ನಡೆಸುತ್ತಿದ್ದವು. ಈಗ ಎಲ್ಲಾ ಬ್ಯಾಂಕ್ಗಳಿಗೂ ಸಮಾನವಾಗಿ 100 ದಶಲಕ್ಷ ಡಾಲರ್ನ ಕಠಿಣ ಮಿತಿಯನ್ನು ಹೇರಲಾಗಿದೆ. ಇದರ ಅರ್ಥ ಒಂದು ಬ್ಯಾಂಕ್ ತನ್ನಲ್ಲಿ ಇಟ್ಟುಕೊಳ್ಳಬಹುದಾದ ಒಟ್ಟು ವಿದೇಶಿ ಕರೆನ್ಸಿಯ (ಮುಖ್ಯವಾಗಿ ಡಾಲರ್) ನಿವ್ವಳ ಮೌಲ್ಯವು ದಿನದ ಅಂತ್ಯಕ್ಕೆ 100 ಮಿಲಯನ್ ಡಾಲರ್ ದಾಟುವಂತಿಲ್ಲ.
ಈಗ ಮಿತಿಯನ್ನು ನಿಗದಿ ಪಡಿಸಿದ್ದರಿಂದ ಬ್ಯಾಂಕ್ಗಳು ತಮ್ಮಲ್ಲಿರುವ ಹೆಚ್ಚುವರಿ ಡಾಲರ್ಗಳನ್ನು ಮಾರಾಟ ಮಾಡಬೇಕಾಗುತ್ತದೆ. ಈ ನಿರ್ಧಾರದಿಂದ ಮಾರುಕಟ್ಟೆಯಲ್ಲಿ ಡಾಲರ್ ಪೂರೈಕೆ ಹೆಚ್ಚಾಗಿ ರೂಪಾಯಿ ಮೌಲ್ಯ ಸ್ಥಿರಗೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಹಾಕಲಾಗಿದೆ.
ಈ ಹಠಾತ್ ಬದಲಾವಣೆಯಿಂದ ಬ್ಯಾಂಕ್ಗಳಿಗೆ ಅಲ್ಪಾವಧಿಯ ನಷ್ಟ (Mark-to-market losses) ಉಂಟಾಗಬಹುದು ಎಂದು ಆತಂಕ ವ್ಯಕ್ತವಾಗಿದೆ. ಬ್ಯಾಂಕುಗಳು ಏಪ್ರಿಲ್ 10 ರೊಳಗೆ ಈ ಮಿತಿಯನ್ನು ತಲುಪಬೇಕಾಗಿರುವುದರಿಂದ ಸುಮಾರು 18 ಶತಕೋಟಿ ಡಾಲರ್ನಿಂದ 30 ಶತಕೋಟಿ ಡಾಲರ್ವರೆಗಿನ ಹೆಚ್ಚುವರಿ ಡಾಲರ್ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ. ಇದನ್ನೂ ಓದಿ: ಅಮೆರಿಕದ 2800 ಕೋಟಿ ಮೌಲ್ಯದ ʻಆಕಾಶದ ಕಣ್ಣʼನ್ನೇ ಕಿತ್ತ ಇರಾನ್ – ವಿಮಾನ 2 ಹೋಳು

