ನವದೆಹಲಿ: ಏ.20ರಿಂದ ವಿಮಾನದಲ್ಲಿ 60% ಸೀಟುಗಳನ್ನು ಉಚಿತವಾಗಿ ಆಯ್ಕೆ ಮಾಡುವ ಆದೇಶ ಜಾರಿಯಾಗಲಿದೆ ಎಂದು ನಾಗರಿಕ ವಿಮಾನಯನ ಸಚಿವಾಲಯ (DGCA) ತಿಳಿಸಿದೆ. ಭಾರತದೊಳಗೆ ಪ್ರಯಾಣಿಸುವವರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸದೇ ಉಚಿತವಾಗಿ ಸೀಟುಗಳ ಆಯ್ಕೆ ಮಾಡಬಹುದು ಎಂದಿದೆ.
ಮಾ.18ರಂದು ವಿಮಾನಯಾನ ಸಚಿವಾಲಯ, ವಿಮಾನಗಳಲ್ಲಿ ಸೀಟು ಆಯ್ಕೆಗಾಗಿ ಹೆಚ್ಚುವರಿ ಶುಲ್ಕದ ಭಾರ ಕಡಿಮೆ ಮಾಡುವ ಉದ್ದೇಶದಿಂದ ಶೇ.60ರಷ್ಟು ಆಸನಗಳನ್ನು ಉಚಿತವಾಗಿ ಆಯ್ಕೆ ಮಾಡಬಹುದು ಎಂದು ಆದೇಶಿಸಿತ್ತು. ಇದೀಗ ಏ.20ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಕೌಟುಂಬಿಕ ಕಲಹ – ಆಂಧ್ರ ಮೂಲದ ಯುವಕ ತರೀಕೆರೆಯಲ್ಲಿ ಆತ್ಮಹತ್ಯೆ
ಸದ್ಯ ವಿಮಾನಗಳಲ್ಲಿ ಕೇವಲ ಶೇ.20ರಷ್ಟು ಆಸನಗಳು ಮಾತ್ರ ಉಚಿತವಾಗಿ ಲಭ್ಯವಾಗುತ್ತಿದ್ದರೆ, ಉಳಿದ ಆಸನಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಏ.20ರಿಂದ ಶೇ.60ರಷ್ಟು ಆಸನಗಳನ್ನು ಉಚಿತವಾಗಿ ಆಯ್ಕೆ ಮಾಡುವ ಅವಕಾಶ ನೀಡಲಾಗುವುದು. ವಿಮಾನಯಾನ ಕಂಪನಿಗಳು ತಮ್ಮ ಸೀಟು ಹಂಚಿಕೆ ನೀತಿಯನ್ನು ಹಾಗೂ ಉಚಿತ ಸೀಟುಗಳ ಲಭ್ಯತೆಯ ಬಗ್ಗೆ ತಮ್ಮ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕೆಂದು ಡಿಜಿಸಿಎ ತಿಳಿಸಿದೆ.
ಇನ್ನೂ ಒಂದೇ ಪ್ರಯಾಣ ವಿವರ ಸಂಖ್ಯೆಯ ಅಡಿಯಲ್ಲಿ ಟಿಕೆಟ್ ಕಾಯ್ದಿರಿಸಿರುವವರನ್ನು ಒಂದೇ ಸ್ಥಳದಲ್ಲಿ, ಸಾಧ್ಯವಾದರೆ ಅಕ್ಕಪಕ್ಕದಲ್ಲಿ ಕೂರಿಸುವುದು ಕಡ್ಡಾಯವಾಗಿದೆ. ಇದರಿಂದ ಕುಟುಂಬದವರು ಹಾಗೂ ಒಟ್ಟಿಗೆ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ. ಇದರ ಜೊತೆಗೆ, ಕ್ರೀಡಾ ಉಪಕರಣಗಳು, ಸಂಗೀತ ವಾದ್ಯಗಳನ್ನು ಸಾಗಿಸುವಲ್ಲಿ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳನ್ನು ಸುರಕ್ಷಿತ ಹಾಗೂ ಪಾರದರ್ಶಕ ರೀತಿಯಲ್ಲಿ ಸಾಗಿಸಲು ಹೊಸ ನಿಯಮಗಳನ್ನು ಜಾರಿಗೆ ತರಲು ಹೇಳಿದೆ.
ವಿಮಾನದಲ್ಲಿ 60% ಸೀಟುಗಳನ್ನು ಉಚಿತವಾಗಿ ಆಯ್ಕೆ ಮಾಡಬಹುದು ಎಂಬ ಕೇಂದ್ರದ ನಿರ್ಧಾರಕ್ಕೆ ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್ ವಿಮಾನಯಾನ ಕಂಪನಿಗಳು ವಿರೋಧ ವ್ಯಕ್ತಪಡಿಸಿದ್ದವು. ಈ ನಿರ್ಧಾರದಿಂದ ವಿಮಾನಯಾನ ವಲಯದ ಮೇಲೆ ಆರ್ಥಿಕವಾಗಿ ಪರಿಣಾಮ ಬೀರಲಿದ್ದು, ಇದರಿಂದ ನಷ್ಟವಾದ ಆದಾಯವನ್ನು ಮರುಪಡೆಯಲು ವಿಮಾನಯಾನ ಕಂಪನಿಗಳು ವಿಮಾನದ ಪ್ರಯಾಣದ ದರವನ್ನು ಹೆಚ್ಚಿಸಬೇಕಾಗುತ್ತದೆ. ಇದರಿಂದ ಸೀಟು ಆಯ್ಕೆ ಮಾಡಲು ಬಯಸದ ಪ್ರಯಾಣಿಕರು ಸೇರಿದಂತೆ ಎಲ್ಲರೂ ಹೆಚ್ಚಿನ ದರ ಪಾವತಿಸಬೇಕಾಗುತ್ತದೆ ಎಂದು ತಿಳಿಸಿತ್ತು.ಇದನ್ನೂ ಓದಿ: Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ

