ಕಲಬುರಗಿ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಜಾಗತಿಕ ಪರಿಣಾಮ ಇದೀಗ ಕಲಬುರಗಿಯ ಬೀದಿ ಬದಿಯ ಸಾಮಾನ್ಯ ಆಟೋ ಚಾಲಕರ ಬದುಕಿನ ಮೇಲೂ ಬೀರಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ವ್ಯತ್ಯಯದ ನೆಪವೊಡ್ಡಿ ಆಟೋ ಎಲ್‌ಪಿಜಿ ದರವನ್ನ ಕ್ಷಣಕ್ಷಣಕ್ಕೂ ಏರಿಕೆ ಮಾಡುತ್ತಿರುವುದನ್ನ ವಿರೋಧಿಸಿದ್ದಾರೆ. ನಗರದ ಮಾರ್ಕೆಟ್ ಪ್ರದೇಶದಲ್ಲಿರುವ ಗ್ಯಾಸ್ ಬಂಕ್ ಮುಂದೆ ಆಟೋ ಚಾಲಕರು ಶನಿವಾರ ಪಂಪ್ ಬಂದ್ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಕಳೆದ 20 ದಿನಗಳ ಹಿಂದಷ್ಟೇ ಲೀಟರ್‌ಗೆ ಸಾಧಾರಣ ಬೆಲೆಯಲ್ಲಿದ್ದ ಗ್ಯಾಸ್ ದರ, ಇದೀಗ ಗಗನಕ್ಕೇರಿದೆ. ನಿನ್ನೆಯವರೆಗೆ ಪ್ರತಿ ಲೀಟರ್‌ಗೆ 85 ರೂ. ಇದ್ದ ದರವು ಇಂದು ಬೆಳಿಗ್ಗೆಯಾಗುವಷ್ಟರಲ್ಲಿ ಅಕ್ಷರಶಃ 99.95 ರೂ. ತಲುಪಿದೆ. ಅಂದರೆ ಕಳೆದ 3 ವಾರಗಳಲ್ಲಿ ಸರಿಸುಮಾರು 30 ರಿಂದ 40 ರೂಪಾಯಿಗಳಷ್ಟು ಏರಿಕೆಯಾಗಿದೆ. ಇದು ಆಟೋ ಚಾಲಕರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಾಡಿಗೆ ಏರಿಲ್ಲ, ಗ್ಯಾಸ್ ಬೆಲೆ ಇಳಿಯುತ್ತಿಲ್ಲ
ದಿನವಿಡೀ ಕಷ್ಟಪಟ್ಟು ದುಡಿಯುವ ಆಟೋ ಚಾಲಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಗ್ಯಾಸ್ ಬೆಲೆ ನೂರರ ಗಡಿ ತಲುಪುತ್ತಿದೆ. ಆದರೆ ಗ್ರಾಹಕರು ನಮಗೆ ಹೆಚ್ಚಿನ ಬಾಡಿಗೆ ನೀಡುತ್ತಿಲ್ಲ. ಹಳೆಯ ದರವನ್ನೇ ಕೇಳುತ್ತಾರೆ. ಗ್ಯಾಸ್‌ಗೆ ಹಣ ಪಾವತಿಸಿದರೆ ನಮಗೆ ಕೈಗೆ ಸಿಗುವುದು ಅಲ್ಪ ಮೊತ್ತ ಮಾತ್ರ. ಈ ಪರಿಸ್ಥಿತಿಯಲ್ಲಿ ಸಂಸಾರ ನಡೆಸುವುದು ಅಸಾಧ್ಯವಾಗಿದೆ. ಎಲ್‌ಪಿಜಿ ಆಟೋಗಳನ್ನ ಓಡಿಸುವುದಕ್ಕಿಂತ ಮನೆಯಲ್ಲೇ ನಿಲ್ಲಿಸುವುದು ಉತ್ತಮ ಎಂಬ ಹತಾಶೆ ಮೂಡುತ್ತಿದೆ ಎಂದು ಚಾಲಕರು ನೋವು ಹಂಚಿಕೊಂಡಿದ್ದಾರೆ.
ಸರ್ಕಾರದ ಆದೇಶವಿಲ್ಲದೇ ದರ ಏರಿಕೆ ಆರೋಪ
ಬಂಕ್ ಮಾಲೀಕರು ಸರ್ಕಾರದ ಯಾವುದೇ ಅಧಿಕೃತ ಆದೇಶವಿಲ್ಲದಿದ್ದರೂ ತಮಗಿಷ್ಟ ಬಂದಂತೆ ದರ ಏರಿಕೆ ಮಾಡುತ್ತಿದ್ದಾರೆ ಎಂದು ಚಾಲಕರು ಗಂಭೀರವಾಗಿ ಆರೋಪಿಸಿದ್ದಾರೆ. ಯುದ್ಧದ ನೆಪವೊಡ್ಡಿ ಬಂಕ್‌ನವರು ನಮಗೆ ಬರೆ ಎಳೆಯುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ದರ ನಿಯಂತ್ರಣ ಮಾಡದಿದ್ದರೆ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಚಾಲಕರು ಎಚ್ಚರಿಕೆ ನೀಡಿದ್ದಾರೆ.
ಈ ಅನಿಶ್ಚಿತತೆಯಿಂದಾಗಿ ನಗರದಲ್ಲಿ ಸಾರಿಗೆ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಚಾಲಕರು ಮತ್ತು ಗ್ರಾಹಕರ ನಡುವೆ ಕಿರಿಕಿರಿ ಉಂಟಾಗುತ್ತಿದೆ. ಸರ್ಕಾರ ಈ ಬಗ್ಗೆ ತಕ್ಷಣ ಗಮನ ಹರಿಸಬೇಕಿದೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ಆಟೋ ಚಾಲಕರ ಪ್ರತಿಭಟನೆ:
ಗ್ಯಾಸ್ ದರ ದಿಢೀರ್ ಏರಿಕೆ ಖಂಡಿಸಿ ನೂರಾರು ಆಟೋ ಚಾಲಕರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಟೋಗಳನ್ನು ಸಾಲಾಗಿ ನಿಲ್ಲಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಕೇವಲ 20 ದಿನಗಳಲ್ಲಿ 40 ರೂ. ಏರಿಕೆ ಮಾಡಿರುವುದು ಬಡವರ ಹೊಟ್ಟೆಯ ಮೇಲೆ ಹೊಡೆದಂತೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ದರ ನಿಯಂತ್ರಿಸಬೇಕು, ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಾಗುವುದು ಎಂದು ಚಾಲಕರು ಎಚ್ಚರಿಸಿದರು.

