ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿರುದ್ಧ ಈಗ ಅಮೆರಿಕದಲ್ಲೇ (America) ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ಇರಾನ್ ವಿರುದ್ಧದ ಯುದ್ಧ ಸೇರಿದಂತೆ ಟ್ರಂಪ್ ಅವರ ನೀತಿಯನ್ನು ವಿರೋಧಿಸಿ ಪ್ರತಿಭಟನಾಕಾರರ (US Protest) ದೊಡ್ಡ ಸಮೂಹವೇ ಬೀದಿಗಿಳಿದಿದ್ದಾರೆ.
ʻನೋ ಕಿಂಗ್ಸ್ʼ (ರಾಜರು ಬೇಡ – No Kings) ಚಳವಳಿಯ ಭಾಗವಾಗಿ ದೇಶದಾದ್ಯಂತ ಪ್ರತಿಭಟನಾಕಾರರು ರ‍್ಯಾಲಿ ನಡೆಸಿ ಟ್ರಂಪ್ ಅವರ ಸರ್ವಾಧಿಕಾರಿ ಧೋರಣೆಯ ಆಡಳಿತ ಶೈಲಿ, ವಲಸೆ ನೀತಿ ಹಾಗೂ ಇರಾನ್ ವಿರುದ್ಧದ ಯುದ್ಧದ (Iran War) ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನೊ ಕಿಂಗ್ಸ್’ ಚಳವಳಿಯ ಭಾಗವಾಗಿ 1 ವರ್ಷದಲ್ಲಿ ಟ್ರಂಪ್ ವಿರುದ್ಧ ಜನರು 3ನೇ ಸಲ ಜನ ಬೀದಿಳಿಗಿಳಿದಿದ್ದಾರೆ.

50 ಸ್ಟೇಟ್‌ಗಳ ದೊಡ್ಡ ಹಾಗೂ ಸಣ್ಣ ನಗರಗಳು ಸೇರಿದಂತೆ 3,200 ಕ್ಕೂ ಹೆಚ್ಚು ಸಮಾವೇಶಗಳಲ್ಲಿ ಕನಿಷ್ಠ 80 ಲಕ್ಷ ಜನರು ಪ್ರತಿಭಟನೆಗೆ ಧುಮುಕಿದ್ದಾರೆ. ಅಮೆರಿಕದ ಅತಿ ಜನನಿಬಿಡ ನಗರವಾದ ನ್ಯೂಯಾರ್ಕ್, ವಾಷಿಂಗ್ಟನ್, ಲಾಸ್ ಏಂಜಲೀಸ್, ಡಲ್ಲಾಸ್, ಫಿಲಡೆಲ್ಫಿಯಾ ಸೇರಿದಂತೆ ಅನೇಖ ನಗರಗಳಲ್ಲಿ ದೊಡ್ಡ ಸಭೆಗಳು, ಪ್ರತಿಭಟನಾ ರ‍್ಯಾಲಿಗಳು ನಡೆದವು. ಆದ್ರೆ ಈ ಕುರಿತು ಅಮೆರಿಕದ ಸರ್ಕಾರಿ ಮೂಲಗಳಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.
2025ರ ಜನವರಿಯಲ್ಲಿ ಟ್ರಂಪ್ 2ನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅವರ ನೀತಿಗಳು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಬರ್ಟ್ ಡಿ ನರೊ ಸಹ ಇದ್ದರು. ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲೂ ಪ್ರತಿಭಟನೆ ಭುಗಿಲೆದ್ದವು. ‘ಫ್ಯಾಸಿಸಂ ವಿರುದ್ಧ ಹೋರಾಡಿ’ ಎಂಬ ಬ್ಯಾನರ್ ಪ್ರದರ್ಶಿಸಿ ಮೆರವಣಿಗೆ ನಡೆಸಲಾಯಿತು.

ಚಳವಳಿ ತೀವ್ರತೆಗೆ ಕಾರಣವೇನು?
ಇರಾನ್‌ನಲ್ಲಿನ ಯುದ್ಧ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮಗಳ ವಿರುದ್ಧ ಶನಿವಾರ ಅಮೆರಿಕ ಮತ್ತು ಯುರೋಪ್‌ನಾದ್ಯಂತ ನಡೆದ ʻನೋ ಕಿಂಗ್ಸ್ʼ ರ‍್ಯಾಲಿಗಳಲ್ಲಿ ಜನ ಗುಂಪುಗುಂಪಾಗಿ ಪ್ರತಿಭಟಿಸಿದರು. ಲಕ್ಷಾಂತರ ಜನರನ್ನು ಒಳಗೊಂಡ ಸಾಮೂಹಿಕ ಪ್ರದರ್ಶನಗಳು ನಡೆದವು. ಬೀದಿಗಳಲ್ಲಿ ಸಾವಿರಾರು ಜನರು ಹೆಗಲಿಗೆ ಹೆಗಲು ಕೊಟ್ಟು ನಿಂತರು. ಕೆಲವರು ತಲೆಕೆಳಗಾಗಿ ಅಮೆರಿಕದ ಧ್ವಜಗಳನ್ನು ಹಿಡಿದು ಆಕ್ರೋಶ ಹೊರಹಾಕಿದರು.

