ಬೆಂಗಳೂರು: ಬೆಂಗಳೂರಿನಲ್ಲಿ ಬರೋಬ್ಬರಿ 18 ವರ್ಷ ಬಳಿಕ ಉದ್ಘಾಟನಾ ಪಂದ್ಯ ನಡೆಯಲಿದ್ದು, ಕಳೆದ ವರ್ಷದ ಭೀಕರ ಕಾಲ್ತುಳಿತ (Chinnaswamy Stampede) ಬಳಿಕ ಇಂದು ಮತ್ತೆ ನಗರದಲ್ಲಿ ಕ್ರಿಕೆಟ್ ರಂಗೇರಲಿದೆ. ಕಾಲ್ತುಳಿತದಿಂದ ಮೃತಪಟ್ಟ ಅಭಿಮಾನಿಗಳಿಗೆ ಗೌರವ ಸಮರ್ಪಿಸುವ ಸಲುವಾಗಿ ಇಂದಿನ ಪಂದ್ಯದಲ್ಲಿ ಕಪ್ಪು ತೋಳುಪಟ್ಟಿ ಧರಿಸಿ ಆರ್‌ಸಿಬಿ (RCB) ಆಟಗಾರರು ಕಣಕ್ಕಿಳಿಯಲಿದ್ದಾರೆ.
ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಭಿಮಾನಿಗಳಿಗೆ ವಿಶೇಷ ಗೌರವ ಸಲ್ಲಿಸಲು ಸಜ್ಜಾಗಿದೆ. ಜೂನ್ 4ರಂದು ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಹಿನ್ನೆಲೆ ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ಪ್ರಾಣ ಕಳೆದುಕೊಂಡ ಆರ್‌ಸಿಬಿ ಕುಟುಂಬದ ಹನ್ನೊಂದು ಸದಸ್ಯರಿಗೆ ಗೌರವ ಸಲ್ಲಿಸಲಿದೆ. ಇಂದು ಆಟಗಾರರು ಅಭ್ಯಾಸದ ಸಮಯದಲ್ಲಿ 11 ಸಂಖ್ಯೆಯನ್ನು ಹೊಂದಿರುವ ಅಭ್ಯಾಸ ಜೆರ್ಸಿಗಳನ್ನು ಧರಿಸಿದ್ದು, ಪಂದ್ಯದ ಸಮಯದಲ್ಲಿ ಕಪ್ಪು ತೋಳುಪಟ್ಟಿಗಳನ್ನು ಧರಿಸಿ ಗೌರವ ಸೂಚಿಸಲಿದ್ದಾರೆ. ಜೊತೆಗೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಹನ್ನೊಂದು ಆಸನಗಳನ್ನು ಖಾಲಿ ಬಿಡುವ ಮೂಲಕ ಮೃತರಿಗೆ ಗೌರವ ಸಮರ್ಪಣೆ ಮಾಡಲಿದೆ. ಇದನ್ನೂ ಓದಿ: ನೂರಾರು ಅಭಿಮಾನಿಗಳಿಂದ ರಕ್ತದಾನ ಮಾಡಿ ಆರ್‌ಸಿಬಿ ಗೆಲುವಿಗೆ ಶುಭ ಹಾರೈಕೆ
ಇನ್ನು ಉದ್ಘಾಟನಾ ಪಂದ್ಯಕ್ಕೆ ಪ್ರವೇಶ ಆರಂಭವಾಗಿದ್ದು, ಸಿಬ್ಬಂದಿ ಟಿಕೆಟ್ ಪರಿಶೀಲಿಸಿ ವೀಕ್ಷಕರನ್ನ ಒಳ ಬಿಡುತ್ತಿದ್ದಾರೆ. ಟಿಕೆಟ್ ಇಲ್ಲದವರಿಗೆ ನಿಲ್ಲಲು ಅವಕಾಶವಿಲ್ಲ. ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚಿನ್ನಸ್ವಾಮಿಯಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಚಿನ್ನಸ್ವಾಮಿ ಮೈದಾನದ ಸುತ್ತಮುತ್ತ ಅಭಿಮಾನಿಗಳು ಜಮಾಯಿಸಿದ್ದಾರೆ. ಮೈದಾನದ ಹೊರಗೆ ಜನ ಸೇರದಂತೆ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಪಂದ್ಯ ನೋಡಲು ಬಂದವರನ್ನು ಬ್ಯಾರಿಕೇಡ್ ಒಳಗಿಂದ ನೇರವಾಗಿ ಮೈದಾನದೊಳಗೆ ಕಳುಹಿಸುತ್ತಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಸರ್ಕಾರದಲ್ಲಿ ವಿಐಪಿ ಸಂಸ್ಕೃತಿ – ತನಗೆ ಐಪಿಎಲ್ ಟಿಕೆಟ್ ಬೇಡ ಎಂದ ಸುರೇಶ್ ಕುಮಾರ್
ಇಂದು ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಬಾರಿ ಟೂರ್ನಿ 2 ತಿಂಗಳಿಗೂ ಹೆಚ್ಚು ಕಾಲ ನಡೆಯಲಿದೆ. ಮೇ 24ರವರೆಗೂ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಮೇ 31ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ. ಟ್ರೋಫಿಗಾಗಿ ಈ ಬಾರಿಯೂ 10 ತಂಡಗಳು ಸೆಣಸಾಡಲಿದ್ದು, ಟೂರ್ನಿಯಲ್ಲಿ ಒಟ್ಟು 65 ದಿನಗಳ ಕಾಲ 74 ಪಂದ್ಯಗಳು ನಡೆಯಲಿವೆ. ಇದನ್ನೂ ಓದಿ: IPL 2026 | ಈವರೆಗೆ ಚುಟುಕು ಕದನದಲ್ಲಿ ಟ್ರೋಫಿ ಗೆದ್ದ ಚಾಂಪಿಯನ್ಸ್ ಯಾರು?

