ಚಿಕ್ಕಮಗಳೂರು: ಮೂಡಿಗೆರೆ (Mudigere) ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಬಿಸಿಲಿನ ವಾತಾವರಣದ ನಡುವೆ ದಿಢೀರನೆ ಶುರುವಾದ ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ.
ಚಿಕ್ಕಮಗಳೂರು (Chikkamagaluru) ನಗರದಲ್ಲೂ ಮಳೆ (Rain) ಅಬ್ಬರಿಸುತ್ತಿದೆ. ಭಾರೀ ಗಾಳಿ ಜೊತೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಯಾವುದೇ ಮುನ್ಸೂಚನೆ ಇಲ್ಲದೇ ಆರಂಭವಾದ ಮಳೆಯಿಂದ ಜನ ಪರದಾಡುವಂತಾಗಿದೆ. ವಾಹನ ಸವಾರರು ವಾಹನ ಚಾಲನೆ ಮಾಡಲು ಸಾಧ್ಯವಾಗದೆ ಪರದಾಡಿದ್ದಾರೆ. ಬೈಕ್ ಸವಾರರು ಅಂಗಡಿಗಳು, ಬಸ್ ನಿಲ್ದಾಣಗಳ ಆಶ್ರಯ ಪಡೆದಿದ್ದಾರೆ. ಕೆಲವೆಡೆ ಗಾಳಿಯ ಅಬ್ಬರಕ್ಕೆ ಕಬ್ಬಿಣದ ತಗಡುಗಳು ಹಾರಿ ಹೋಗಿವೆ. ಇದನ್ನೂ ಓದಿ: ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ ಸಾಧ್ಯತೆ
ಮೂಡಿಗೆರೆ ಪಟ್ಟಣದಲ್ಲಿ ಭಾರೀ ಗಾಳಿ-ಮಳೆಗೆ ರಸ್ತೆ ಬದಿ ಪಾರ್ಕ್ ಮಾಡಿ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಮೂಡಿಗೆರೆ ಪಟ್ಟಣದಲ್ಲಿ ಮಳೆ ಅಬ್ಬರಕ್ಕೆ ಬೃಹತ್ ತೆಂಗಿನಮರ ಮುರಿದು ಬಿದ್ದಿದ್ದು ರಸ್ತೆ ಬದಿಯ ವಿದ್ಯುತ್ ಕಂಬದ ತಂತಿ ಮೇಲೆ ನಿಂತಿದೆ. ಮರ ಬೀಳುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಟ್ ಆಗಿದ್ದು ದೊಡ್ಡ ಅನಾಹುತವೊಂದು ಪಾರಾದಂತಾಗಿದೆ. ಗಾಳಿ-ಮಳೆಗೆ ಪದವಿ ಪೂರ್ವ ಕಾಲೇಜಿನ ಮೇಲ್ಛಾವಣಿಯ ಹೆಂಚುಗಳು ಹಾರಿ ಹೋಗಿವೆ. ಬಿದರಹಳ್ಳಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿಯೇ ಹಾರಿ ಹೋಗಿದೆ.
ಬಿಸಿಲ ಧಗೆಗೆ ಕಂಗೆಟ್ಟಿದ್ದ ರೈತರು ಮಾತ್ರ ಮಳೆ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕಾಫಿ ಗಿಡಗಳಿಗೆ ನೀರು ಹಾಯಿಸಲು ಪರದಾಡುತ್ತಿದ್ದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಇದನ್ನೂ ಓದಿ: ಹಾವೇರಿಯಲ್ಲಿ ಬಿರುಗಾಳಿ ಸಹಿತ ಮಳೆ – ಧರೆಗೆ ಉರುಳಿದ ವಿದ್ಯುತ್ ಕಂಬಗಳು, ಮರ ಬಿದ್ದು ಆಟೋ ಜಖಂ

