– ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬಾರದು
ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ (Davanagere South) ಉಪ ಚುನಾವಣೆಯಲ್ಲಿ (By Election) ಕಾಂಗ್ರೆಸ್ (Congress) ಬಂಡಾಯಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾಮಪತ್ರ ಹಿಂಪಡೆಯದೇ ಕಣದಲ್ಲಿ ಉಳಿದಿದ್ದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ (Sadiq Pailwan) ಅವರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಖಾನ್ ಅವರು ಇಂದು ಸಾದಿಕ್ ಪೈಲ್ವಾನ್ ಅವರನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಕರೆದುಕೊಂಡು ಬಂದಿದ್ದರು. ಸಿಎಂ ಸಿದ್ದರಾಮಯ್ಯ ಅವರು ಸಾದಿಕ್ ಪೈಲ್ವಾನ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲು ಅವರು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಶಿವಶಂಕರಪ್ಪಗಿಂತ ಹೆಚ್ಚು ಮತಗಳ ಅಂತರದಿಂದ ಸಮರ್ಥ್ ಗೆಲುವು – ಡಿಕೆಶಿ
ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪುತ್ರ ಸಮರ್ಥ್ಗೆ ಟಿಕೆಟ್ ನೀಡಿದ್ದಕ್ಕಾಗಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಾದಿಕ್ ಪೈಲ್ವಾನ್ ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಮಾತಿಗೆ ಸಮ್ಮತಿ ಸೂಚಿಸಿ, ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಟಿಕೆಟ್ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡು ನಾಮಪತ್ರ ಸಲ್ಲಿಸಿದ್ದೆ. ನಿಮ್ಮ ಜೊತೆಗಿನ ಮಾತುಕತೆ ಸಮಾಧಾನ ತಂದಿದೆ. ಈಗಿನಿಂದಲೇ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ. ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬಾರದು, ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆಂದು ಸಾದಿಕ್ ಅವರು ಸಿಎಂಗೆ ಭರವಸೆ ನೀಡಿದ್ದಾರೆ.
ಸಿಎಂ ಭೇಟಿ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿಯಾದರು. ಈ ಮೂಲಕ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಬಂಡಾಯ ಶಮನವಾದಂತಾಗಿದೆ. ಇದನ್ನೂ ಓದಿ: ಉಪಚುನಾವಣೆ | ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಲಿಖಿತ ಪರೀಕ್ಷೆ ಏ.10ಕ್ಕೆ ಮುಂದೂಡಿಕೆ

