– ಕರ್ನಾಟಕ ಮಾಹಿತಿ ಆಯೋಗದಿಂದ ಆದೇಶ
– ಅರ್ಜಿದಾರರಿಗೆ 16 ಸಾವಿರ ಪರಿಹಾರ ನೀಡುವಂತೆ ನಿರ್ದೇಶನ
ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳದ ಶ್ರೀ ಮಾರಿಯಮ್ಮ ದೇವಸ್ಥಾನ (Sri Mariyamma Temple, Karkala) ಸಾರ್ವಜನಿಕ ಮಾಹಿತಿ ಆಧಿಕಾರಿಯಾದ ಆಡಳಿತ ಮೊಕ್ತೇಸರ ಕೆ.ಪಿ. ಗೋಪಾಲಕೃಷ್ಣರಾವ್ ಅವರಿಗೆ ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ಒಂದು ಲಕ್ಷ ರೂ. ದಂಡ (Fine) ವಿಧಿಸಿ ಕರ್ನಾಟಕ ಮಾಹಿತಿ ಆಯೋಗ (Karnataka Information Commission) ಆದೇಶ ಮಾಡಿದೆ. ಅರ್ಜಿದಾರರಿಗೆ ನಾಲ್ಕು ಪ್ರಕರಣಗಳಿಂದ 16 ಸಾವಿರ ರೂ. ಪರಿಹಾರ ಸಹ ನೀಡಬೇಕೆಂದು ನಿರ್ದೇಶನ ನೀಡಿದೆ.
ಅರ್ಜಿದಾರ ಸೋಮನಾಥ ನಾಯಕ್ ಕೆ. ಅವರು ದೇವಾಲಯಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಸಲ್ಲಿಸಿ ಕೆಲವೊಂದು ಮಾಹಿತಿಗಳನ್ನು ಕೋರಿದ್ದರು. ಶ್ರೀ ಮಾರಿಯಮ್ಮ ದೇವಾಲಯ ಮುಜುರಾಯಿ ದೇವಾಸ್ಥಾನವಾಗಿದ್ದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಡಳಿತ ಮೋಕ್ತೇಸರ ಅವರನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಆದರೂ ಅವರು ಆಯೋಗದ ವಿಚಾರಣೆಗಳಿಗೆ ಹಾಜರಾಗುತ್ತಿರಲಿಲ್ಲ, ಅರ್ಜಿದಾರರಿಗೆ ಮಾಹಿತಿಯನ್ನೂ ನೀಡುತ್ತಿರಲಿಲ್ಲ.

ದೇವಾಲಯಕ್ಕೆ ಸರ್ಕಾರದಿಂದ ವಾರ್ಷಿಕ 60 ಸಾವಿರ ರೂ. ವರ್ಷಾಸನ ಹಾಗೂ 2022 ರಲ್ಲಿ ದೇವಾಲಯ ನವೀಕರಣಕ್ಕೆ ಸರ್ಕಾರದಿಂದ 25 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆದ್ದರಿಂದ ಕೂಡಲೇ ಮಾಹಿತಿ ನೀಡುವಂತೆ ಆಯೋಗ ಆದೇಶ ನೀಡಿದ್ದರೂ ಸಾರ್ವಜನಿಕ ಮಾಹಿತಿ ಆಧಿಕಾರಿ ಗೋಪಾಲಕೃಷ್ಣರಾವ್ ಪಾಲಿಸಿರಲಿಲ್ಲ. ಇದನ್ನೂ ಓದಿ: ಶಿಳ್ಳೆ ಹಾಕಿದ್ದು ಯಾರು? ಕೂರಲು ಆಗದೇ ಇದ್ರೆ ಬನ್ಸ್ ತಿಂದು ಹೋಗಿ – ಯಕ್ಷಗಾನ ಪ್ರೇಕ್ಷಕರ ವಿರುದ್ಧ ಅಶೋಕ್ ಭಟ್ ಗರಂ
ಗೋಪಾಲಕೃಷ್ಣರಾವ್ ಅವರಿಗೆ ವಿಧಿಸಿದ ದಂಡ ಮೊತ್ತವನ್ನು ಅವರ ವೇತನದಿಂದ ವಜಾ ಮಾಡಿ “Head of Account ʼ0070-60-118-0-01-000ʼ penalties under the Act under a new minor recipts under the RTI Act” ಖಾತೆಗೆ ಜಮಾ ಮಾಡಿ, ಜಮಾ ಮಾಡಿದ ರಶೀದಿಯೊಂದಿಗೆ ವರದಿ ಸಲ್ಲಿಸಬೇಕೆಂದು ಉಡುಪಿ ಜಿಲ್ಲೆಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ.
ಸೋಮನಾಥ ನಾಯಕ್ ನವೆಂಬರ್ 9, 2023 ರಂದು ಬ್ರಹ್ಮಕಲಶದ ಪೂರ್ವಬಾವಿಯಾಗಿ ನಡೆದ ಮುಷ್ಟಿಕಾಣಿಕೆ, ನಿಧಿಕುಂಭ, ಹೊರೆಕಾಣಿಕೆಯ ಬಗ್ಗೆ ನಮೂದಿಸಿದ ಎಲ್ಲಾ 3 ಪ್ರಶ್ನೆಗಳಿಗೆ ಸವಿವರವಾದ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಉಡುಪಿಯಿಂದ 20 ದಿನದ ಒಳಗೆ ಸ್ಪಷ್ಟ ಮಾಹಿತಿಯನ್ನು ನೀಡುವಂತೆ ಕೇಳಿದ್ದರು.

