– ಹಾರ್ಮುಜ್ ಬಿಕ್ಕಟ್ಟಿನ ಮಧ್ಯೆಯೂ ಇರಾನ್ ಗಳಿಕೆ ದಿನಕ್ಕೆ 13 ಸಾವಿರ ಕೋಟಿ
– ಸೇನೆಯ ಸನ್ನದ್ಧತೆ ಬಗ್ಗೆ ಕಳವಳ; ಇಸ್ರೇಲ್‌ಗೆ ಇಯಾಲ್ ಜಮೀರ್ ಎಚ್ಚರಿಕೆ
ಟೆಹ್ರಾನ್/ಜೆರುಸಲೆಂ: ಮಧ್ಯಪ್ರಾಚ್ಯದ ಸಂಘರ್ಷ ಇನ್ನಷ್ಟು ದಿನ ಹೆಚ್ಚುವ ಸಾಧ್ಯತೆಗಳಿದೆ, ಕದನ ವಿರಾಮದ ದಿನಾಂಕ ಪದೇ ಪದೇ ಮುಂದೂಡುತ್ತಿರುವ ಅಮೆರಿಕ – ಇರಾನ್ (US vs Iran_ ಮುಂದೆ ಮಾತುಕತೆ ಪ್ರಸ್ತಾಪ ಇಡುತ್ತಿದೆ. ಆದರೆ ಸಂಪೂರ್ಣ ಶರಣಾಗತಿ ಸಾಧ್ಯವಿಲ್ಲ ಎಂದಿರುವ ಇರಾನ್ ಮಾತುಕತೆಯನ್ನು ಧಿಕ್ಕರಿಸಿ ದಾಳಿ ಮುಂದುವರಿಸಿದೆ. ಈ ನಡುವೆ ಇಸ್ರೇಲ್‌ಗೆ ಗೆ ಗಂಭೀರ ಎಚ್ಚರಿಕೆಯೊಂದು ಸಿಕ್ಕಿದೆ.
ದೊಡ್ಡಣ್ಣನ ಎದುರು ಮಂಡಿಯೂರದ ಇರಾನ್
ಅಮೆರಿಕ – ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ 28 ನೇ ದಿನಕ್ಕೆ ತಲುಪಿದೆ. ಕದನ ವಿರಾಮದ ಮಾತುಕತೆಗಳ ನಡುವೆ ತೀವ್ರ ಸ್ವರೂಪದ ದಾಳಿಗಳು ನಡೆಯುತ್ತಿವೆ. 15 ಷರತ್ತುಗಳೊಂದಿಗೆ ಕದನ ವಿರಾಮದ ಪ್ರಸ್ತಾಪ ಇಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೆ ಕದನ ವಿರಾಮದ ದಿನಾಂಕ ಮುಂದೂಡಿದ್ದಾರೆ.

ಇಂಧನ ಮೂಲಸೌಕರ್ಯಗಳನ್ನ ಗುರಿಯಾಗಿಸಿಕೊಂಡು ಸೇನಾ ಕಾರ್ಯಾಚರಣೆ ಕೈಗೊಳ್ಳಲು ಸಿದ್ಧವಾಗಿದ್ದ ಅಮೆರಿಕ, ಇದೀಗ ಇದ್ದಕ್ಕಿದ್ದಂತೆ 10 ದಿನಗಳ ಗಡುವು ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. ಈ ಮೂಲಕ ಟ್ರಂಪ್ ಅವರು ಯುದ್ಧದ ನಡುವೆಯೂ ರಾಜತಾಂತ್ರಿಕ ಮಾರ್ಗಕ್ಕೆ ಒತ್ತು ನೀಡುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಅವರು, ಈ ನಿರ್ಧಾರವನ್ನು ಇರಾನ್‌ನ ವಿನಂತಿಯ ಮೇರೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮಾತುಕತೆಗಳಿಗೆ ಇನ್ನಷ್ಟು ಸಮಯ ನೀಡುವುದರಿಂದ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬಹುದು ಎಂಬ ನಂಬಿಕೆಯನ್ನ ಅವರು ವ್ಯಕ್ತಪಡಿಸಿದ್ದಾರೆ. ಈ ಅವಧಿಯಲ್ಲಿ ಇರಾನ್ ತನ್ನ ನಿಲುವಿನಲ್ಲಿ ಬದಲಾವಣೆ ತರಬಹುದು ಮತ್ತು ಅಮೆರಿಕ ನೀಡಿದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಬಹುದು ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ. ಆದರೆ, ಇರಾನ್ ಈ ಹೇಳಿಕೆಗಳಿಗೆ ಸ್ಪಷ್ಟ ಬೆಂಬಲ ನೀಡಿಲ್ಲ. ಅಮೆರಿಕ ನೀಡಿದ ಪ್ರಸ್ತಾವನೆಗಳು ಏಕಪಕ್ಷೀಯವಾಗಿವೆ ಮತ್ತು ತಮ್ಮ ಹಿತಾಸಕ್ತಿಗಳಿಗೆ ಅನುಕೂಲಕರವಾಗಿಲ್ಲ ಎಂದು ಟೀಕಿಸಿದೆ.

ಪಾಕ್ ಮಧ್ಯಸ್ಥಿಕೆ
ಪಾಕಿಸ್ತಾನ, ಟರ್ಕಿ ಮತ್ತು ಇತರ ಕೆಲವು ದೇಶಗಳು ಅಮೆರಿಕ ಮತ್ತು ಇರಾನ್ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ. ನೇರ ಮಾತುಕತೆಗಳಿಗಿಂತ ಪರೋಕ್ಷ ಮಾತುಕತೆಗಳು ನಡೆಯುತ್ತಿರುವುದರಿಂದ ಶಾಂತಿ ಒಪ್ಪಂದದ ಬಗ್ಗೆ ಅನುಮಾನಗಳು ಮೂಡತೊಡಗಿವೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ ಇರಾನ್ ಜೊತೆಗಿನ ಮಾತುಕತೆಗಳು ಉತ್ತಮ ರೀತಿಯಲ್ಲಿ ಸಾಗುತ್ತಿದೆ ಎಂಬ ಹೇಳಿಕೆ ಮತ್ತು ಇರಾನ್ ಪ್ರತಿಕ್ರಿಯೆ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.
ಮಾತುಕತೆ ನಡುವೆಯೇ ಹೊಸ ದಾಳಿ
ಕದನ ವಿರಾಮಕ್ಕೆ ಮಾತುಕತೆಗಳು ನಡೆಯುತ್ತಿರುವ ಹೊತ್ತಲ್ಲೇ ಆಪರೇಷನ್ ಟ್ರೂ ಪ್ರಾಮಿಸ್-4 ರ 83 ನೇ ಹೊಸ ದಾಳಿಯನ್ನ ಇರಾನ್‌ನ ಐಆರ್‌ಜಿಸಿ ಪ್ರಾರಂಭಿಸಿದೆ. ಸುಧಾರಿತ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಧ್ಯಪ್ರಾಚ್ಯದ ಪ್ರಮುಖ ಅಮೆರಿಕನ್ ಮತ್ತು ಇಸ್ರೇಲಿ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿ ದಾಳಿ ಅಮೇರಿಕಾದ ನೆಲೆಗಳು ಮತ್ತು ಇಸ್ರೇಲ್ ಮೇಲೆ ತೀವ್ರ ಸ್ವರೂಪದ ದಾಳಿ ನಡೆಸುತ್ತಿದೆ.

ಬಿಕ್ಕಟ್ಟಿನ ನಡುವೆಯೂ ಇರಾನ್‌ಗೆ ಭರ್ಜರಿ ಆದಾಯ
ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಬಳಿಕವೂ ಇರಾನ್ ದೇಶ 139 ದಶಲಕ್ಷ ಡಾಲರ್ (ಸುಮಾರು 13 ಸಾವಿರ ಕೋಟಿ) ಹೆಚ್ಚುವರಿ ಆದಾಯವನ್ನು ತೈಲ ಮಾರಾಟದಿಂದ ಗಳಿಸುತ್ತಿರುವ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಹಾರ್ಮುಝ್ ಜಲಸಂಧಿಯ ಮೂಲಕ ಇರಾನ್ ಹಡಗುಗಳು ಮಾತ್ರ ಹಾದುಹೋಗಲು ಅವಕಾಶವಿರುವುದರಿಂದ ಕಚ್ಚಾತೈಲದ ಬೆಲೆ ಏರಿಕೆಯ ಲಾಭವನ್ನು ಇರಾನ್ ಪಡೆಯುತ್ತಿದೆ. ಅತಿಹೆಚ್ಚು ತೈಲ ರಫ್ತು ಮಾಡುತ್ತಿರುವ ದೇಶವಾಗಿ ಇರಾನ್ ಹೊರಹೊಮ್ಮಿದೆ. ಯುದ್ಧಾರಂಭಕ್ಕಿಂತ ಮೊದಲು ಪಡೆಯುತ್ತಿದ್ದ ದುಪ್ಪಟ್ಟು ಆದಾಯವನ್ನು ಇರಾನ್ ಪಡೆಯುತ್ತಿದೆ. ಮುಖ್ಯವಾಗಿ ಚೀನಾ ಸೇರಿದಂತೆ ಹಲವು ಗ್ರಾಹಕರಿಗೆ ಕಚ್ಚಾ ತೈಲವನ್ನು ಮಾರಾಟ ಮಾಡುತ್ತಿದೆ.
ಈ ನಡುವೆ ಶತ್ರುದೇಶಗಳ ಹಡಗು ಹಾರ್ಮುಝ್ ಜಲಸಂಧಿಯನ್ನು ಪ್ರವೇಶಿಸದಂತೆ ತಡೆಯುವ ಕಾನೂನುಬದ್ಧ ಹಕ್ಕು ಇರಾನ್ ಗೆ ಇದೆ ಎಂದು ಇರಾನ್ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಅಬ್ಬಾಸ್ ಅರಘ್ಚಿ ಪ್ರತಿಪಾದಿಸಿದ್ದಾರೆ.
ಇಸ್ರೇಲ್‌ಗೆ ಬಂತು ಬಹುದೊಡ್ಡ ಎಚ್ಚರಿಕೆ
ಇರಾನ್, ಲೆಬನಾನ್ ಮೇಲೆ ತೀವ್ರ ದಾಳಿ ನಡೆಸುತ್ತಿರುವ ಹೊತ್ತಲ್ಲೇ ಇಸ್ರೇಲ್‌ಗೆ ಬಹುದೊಡ್ಡ ಎಚ್ಚರಿಕೆ ಬಂದಿದೆ. ಇಸ್ರೇಲ್‌ನಲ್ಲಿ ಮಿಲಿಟರಿ ಶಕ್ತಿ ಕುಸಿಯುವ ಸಾಧ್ಯತೆ ಇದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಜಮೀರ್ ಎಚ್ಚರಿಕೆ ನೀಡಿದ್ದಾರೆ. ಭದ್ರತಾ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿರುವ ಜಮೀರ್ ಸೇನೆಯ ಸನ್ನದ್ಧತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ಸುಧೀರ್ಘ ಯುದ್ಧಕ್ಕೆ ಇಸ್ರೇಲ್ ಸನ್ನದ್ಧಗೊಂಡಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

