ಬೆಂಗಳೂರು: ಸಿಲಿಕಾನ್ ಸಿಟಿ ಹೊರವಲಯದ ಬಳಿ ಭೀಕರ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಪಂಚರ್ ಆಗಿ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಟಾಟಾ ಎಸ್ ಡಿಕ್ಕಿಯಾಗಿದೆ.
ಅತೀ ವೇಗದಲ್ಲಿ ಸಾಗುತ್ತಿದ್ದ ಟಾಟಾ ಏಸ್ ವಾಹನ ಡಿಕ್ಕಿಯಾಗಿದೆ. ಪರಿಣಾಮ ಟಾಟಾ ಏಸ್ ವಾಹನದ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಡಿಕ್ಕಿ ರಭಸಕ್ಕೆ ಚಾಲಕ ಹಾಗೂ ಸಹಾಯಕ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆ ಮೇಲೆ ಈ ಅಪಘಾತ ನಡೆದಿದೆ. ಇದನ್ನೂ ಓದಿ: ಉಪಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಹಣ ಸಾಗಣೆ; 32.50 ಲಕ್ಷ ಹಣ ಜಪ್ತಿ
ಕೋಲಾರದಿಂದ ಬೆಂಗಳೂರಿಗೆ ಆಲೂಗಡ್ಡೆ ತುಂಬಿಸಿಕೊಂಡು ಬಂದಿದ್ದ ಕ್ಯಾಂಟರ್ ವಾಹನ, ಪಂಚರ್ ಆಗಿ ಮೇಡಹಳ್ಳಿ ಮೇಲ್ಸೇತುವೆ ಮೇಲೆ ನಿಂತಿದೆ. ಹೀಗಾಗಿ, ಕ್ಯಾಂಟರ್ ಚಾಲಕ ವಾಹನದ ಟೈಯರ್ ಬದಲಾಯಿಸಲು ಮುಂದಾಗಿದ್ದಾನೆ. ಆದರೆ ನಿಂತಿರುವ ಕ್ಯಾಂಟರ್ ಗಮನಿಸದೇ ಅತೀ ವೇಗವಾಗಿ ಸಾಗುತ್ತಿದ್ದ ಟಾಟಾ ಏಸ್ ವಾಹನ ಭೀಕರವಾಗಿ ಅಪಘಾತಕ್ಕೀಡಾಗಿದೆ.
ವೈಟ್ಫೀಲ್ಡ್ ನಿವಾಸಿಗಳಾದ ಮಣಿಕಂಠ, ಸುರೇಶ್, ಶ್ರೀನಿವಾಸ್ ಮೃತ ದುರ್ದೈವಿಗಳು. ಈ ಬಗ್ಗೆ ಉತ್ತರ ವಿಭಾಗ ಡಿಸಿಪಿ ನೇಮಗೌಡ ಮಾತನಾಡಿ, ನಗರದ ಮೇಡಹಳ್ಳಿ ಬ್ರಿಡ್ಜ್ ಬಳಿ ಅಪಘಾತವಾಗಿದೆ. ಕೋಲಾರದಿಂದ ಆಲೂಗಡ್ಡೆ ತುಂಬಿದ ಈಚರ್ ವಾಹನ ನಗರದ ಕಡೆ ಬಂದಿದ್ದು, ತಾಂತ್ರಿಕ ತೊಂದರೆಯಿಂದ ಚಾಲಕ ಲಾರಿಯನ್ನ ಸೈಡ್ಗೆ ಹಾಕಿದ್ದಾನೆ. ಇದೇ ವೇಳೆ ಹೊಸಕೋಟೆಯಿಂದ ಕೆಆರ್ ಪುರಂಗೆ ಬರ್ತಿದ್ದ ಟಾಟಾ ಏಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸಾವಾಗಿದೆ. ಮೇಲ್ನೋಟಕ್ಕೆ ಈಚರ್ ವಾಹನ ಚಾಲಕನ ನಿರ್ಲಕ್ಷ್ಯ ಕಂಡುಬಂದಿದೆ. ಮೃತರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ, ಪರಿಶೀಲಿಸಲಾಗ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು | ನಿಂತಿದ್ದ ಕ್ಯಾಂಟರ್ಗೆ ಟಾಟಾ ಏಸ್ ಡಿಕ್ಕಿ – ಸ್ಥಳದಲ್ಲೇ ಮೂವರು ಸಾವು

