ಬೆಂಗಳೂರು: ಸತತ ಎರಡನೇ ದಿನ ಸಂಜೆ ಬೆಂಗಳೂರಿನಲ್ಲಿ ಮಳೆಯಾಗಿದ್ದು (Bengaluru Rain) ನಗರದ ಹಲವಡೆ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ.
ನಾಳೆ ಯುಗಾದಿ ಬಳಿಕ ರಂಜನ್ ಹಬ್ಬ ಶನಿವಾರ ಭಾನುವಾರ ರಜೆ ಇರುವ ಕಾರಣ ಎಂದಿನಂತೆ ಜನರು ವಾಹನದಲ್ಲಿ ಊರಿಗೆ ತೆರಳುತ್ತಿದ್ದರು. ಸಂಜೆ ಊರಿಗೆ ತೆರಳುವ ಸಮಯದಲ್ಲೇ ಮಳೆ ಬಿದ್ದಿದೆ.
ಸಾಲು ಸಾಲು ರಜೆ ಹಿನ್ನಲೆಯಲ್ಲಿ ಮೈಸೂರು ರಸ್ತೆಯಲ್ಲಿ ಮೊದಲೇ ನಿಧಾನವಾಗಿ ವಾಹನಗಳು ಸಂಚರಿಸುತ್ತಿದ್ದವು. ಈಗ ಮಳೆ ಸುರಿದ ಪರಿಣಾಮ ಮಾರ್ಕೆಟ್ ಫ್ಲೈ ಓವರ್‌ನಿಂದ ನಾಯಂಡಹಳ್ಳಿಯವರೆಗೆ ಟ್ರಾಫಿಕ್ ಜಾಮ್ ಆಗಿದೆ.
ಮೈಸೂರು ರೋಡ್, ಹೊಸಗುಡ್ಡದಹಳ್ಳಿ, ಚಾಮರಾಜಪೇಟೆ, ಬಾಪೂಜಿ ನಗರ, ನಾಯಂಡಹಳ್ಳಿ, ಸೇರಿದಂತೆ ಹಲವೆಡೆ ಮಳೆಯಾಗಿದೆ. ಹಲಸೂರು, ಇಂದಿರಾನಗರ, ಬೈಯ್ಯಪ್ಪನಹಳ್ಳಿ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ.
ಕಾರು, ಆಟೋ, ಬೈಕ್‌ಗಳ ಮೇಲೆ ಪಟಪಟನೆ ಬಿದ್ದ ಆಲಿಕಲ್ಲು ಮಳೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ರಸ್ತೆ ತುಂಬೆಲ್ಲಾ ಆಲಿಕಲ್ಲು ಬಿದ್ದಿದ್ದು ಮೊಬೈಲಿನಲ್ಲಿ ಜನರು ಸೆರೆ ಹಿಡಿಯುತ್ತಿದ್ದಾರೆ.

