ರಾಮನಗರ: ಬಿಡದಿಯ ವಂಡರ್‌ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರೋ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ರೆಸಾರ್ಟ್‌ಗೆ ಬಂದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ವೀರಪ್ಪನ್ ಪುತ್ರಿ ವಿದ್ಯಾರಾಣಿ ಭೇಟಿ ಮಾಡಿದ್ದಾರೆ.
ಶಿವಕುಮಾರ್ ಅವರು ರೆಸಾರ್ಟ್‌ಗೆ ಬರುವುದಕ್ಕೆ ಮುಂಚೆಯೇ ವಿದ್ಯಾ ತಮ್ಮ ಬೆಂಬಲಿಗರೊಂದಿಗೆ ಬಂದು ಕಾಯುತ್ತಾ ಕುಳಿತಿದ್ದರು. ಡಿಸಿಎಂ ಬಂದು ಕಾರಿನಿಂದ ಇಳಿಯುತ್ತಿದ್ದಂತೆಯೇ ಸ್ಥಳೀಯ ಕಾಂಗ್ರೆಸ್ ನಾಯಕರು ಅವರನ್ನು ಮುತ್ತಿಕೊಂಡರು. ಇದೇ ವೇಳೆ, ಮುಖಂಡರೊಬ್ಬರು ವಿದ್ಯಾ ಅವರನ್ನು ಡಿಸಿಎಂ ಬಳಿ ಕರೆದು ಪರಿಚಯಿಸಿದರು.
ಡಿಕೆಶಿಗೆ ಫೋಟೊ ನೀಡಿ ನಮಸ್ಕರಿಸಿದ ವಿದ್ಯಾ, ತಮ್ಮ ಬಗ್ಗೆ ಭೇಟಿ ಉದ್ದೇಶ ಹೇಳಲು ಮುಂದಾದರು. ಆಗ ಶಿವಕುಮಾರ್ ಅವರು ಆಮೇಲೆ ಮಾತನಾಡುವೆ ಎಂದು ಕೈ ಸನ್ನೆ ಮಾಡುತ್ತಾ, ರೆಸಾರ್ಟ್ ಒಳಕ್ಕೆ ಹೋದರು.
ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಇಂಗಿತವನ್ನು ವಿದ್ಯಾ ಅವರು ಹೊಂದಿದ್ದಾರೆ. ಆ ಕುರಿತು ಮಾತನಾಡಲು ಶಿವಕುಮಾರ್ ಭೇಟಿಗಾಗಿ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

