– 3,100 ಟನ್ ಕಚ್ಚಾ ಡಾಂಬರ್ ಹೊತ್ತು ಬಂದ ‘ಚೆಂಗ್ ಎಕ್ಸ್’
ಕಾರವಾರ: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಸಮುದ್ರ ಮಾರ್ಗದ ವಾಣಿಜ್ಯ ಚಟುವಟಿಕೆಗಳಿಗೆ ಹೊಡೆತ ಬಿದ್ದಿರುವ ನಡುವೆಯೇ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಿಂದ ಕಚ್ಚಾ ಡಾಂಬರ್ (ಬಿಟುಮಿನ್) ಹೊತ್ತ ಹಡಗು ಕಾರವಾರದ ವಾಣಿಜ್ಯ ಬಂದರಿಗೆ ಆಗಮಿಸಿದೆ.
‘ಚೆಂಗ್ ಎಕ್ಸ್’ (Cheng X) ಎನ್ನುವ ಸರಕು ಸಾಗಣೆ ಹಡಗು ಸುಮಾರು 3,100 ಟನ್ ಬಿಟುಮಿನ್ ಹೊತ್ತು ಕಾರವಾರ ಬಂದರಿಗೆ ತಲುಪಿದೆ. ಈ ಹಡಗು ಸಾಮಾನ್ಯವಾಗಿ ಸುಮಾರು 5,500 ಟನ್ ಬಿಟುಮಿನ್ ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ಅಮೆರಿಕದ ಫೈಟರ್ ಜೆಟ್‌ಗಳಿಗೆ ಇಂಧನ ಪೂರೈಸುವ ವಿಮಾನ ಪತನ – ನಾಲ್ವರು ಸಾವು, ಇಬ್ಬರಿಗೆ ಗಾಯ
ಯುಎಇ ಯಿಂದ ಮಾರ್ಚ್ 3 ರಂದು ಹೊರಟಿದ್ದ ಈ ಹಡಗು ಹಾರ್ಮುಜ್ ಜಲಸಂಧಿ ಮಾರ್ಗ ಪಕ್ಕದ ಮಾರ್ಗದ ಮೂಲಕ ಪ್ರಯಾಣಿಸಿ ಕಾರವಾರ ಬಂದರಿಗೆ ತಲುಪಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗಗಳಲ್ಲಿ ಭದ್ರತಾ ಕ್ರಮಗಳು ಹೆಚ್ಚಾಗಿದ್ದು, ಹಡಗುಗಳ ಸಂಚಾರಕ್ಕೂ ಅನೇಕ ಅಡಚಣೆಗಳು ಎದುರಾಗುತ್ತಿವೆ. ಹಾರ್ಮುಜ್ ಜಲಸಂಧಿ ಭಾಗದಲ್ಲಿ ಇರಾನ್‌ನಿಂದ ಇರುವ ನಿರ್ಬಂಧಗಳು ಮತ್ತು ಉದ್ವಿಗ್ನ ಪರಿಸ್ಥಿತಿ ಕಾರಣವಾಗಿ ಹಡಗು ಸಂಚಾರದಲ್ಲಿ ಅನಿಶ್ಚಿತತೆ ಉಂಟಾಗಿದೆ.
ಕಾರವಾರ ಬಂದರಿಗೆ ಬಂದಿರುವ ಈ ಹಡಗು ಬಿಟುಮಿನ್ ಡಂಪ್ ಮಾಡಿದ ನಂತರ ಮರಳಿ ತೆರಳುವ ಕುರಿತು ಇನ್ನೂ ಸ್ಪಷ್ಟ ಸೂಚನೆ ದೊರಕಿಲ್ಲ ಎನ್ನಲಾಗಿದ್ದು, ಹಡಗಿನ ಸಿಬ್ಬಂದಿ ಮರಳಿ ಯುಎಇಗೆ ತೆರಳುವ ವಿಚಾರದಲ್ಲೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮಧ್ಯಪ್ರಾಚ್ಯ ಯುದ್ಧದ ನಂತರ ಯುಎಇಯಿಂದ ಕಾರವಾರ ಬಂದರಿಗೆ ಆಗಮಿಸಿದ ಮೊದಲ ಹಡಗು ಇದಾಗಿದ್ದು, ಬಂದರು ವಾಣಿಜ್ಯ ಚಟುವಟಿಕೆಗೆ ಇದು ಸ್ವಲ್ಪ ಮಟ್ಟಿಗೆ ಚೈತನ್ಯ ನೀಡಿದಂತಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಸಮುದ್ರ ಮಾರ್ಗದ ಪರಿಸ್ಥಿತಿ ಹೇಗಿರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಇರಾನ್ ಶೀಘ್ರವೇ ಶರಣಾಗಲಿದೆ ಎಂದ ಟ್ರಂಪ್ – ಕೊಲ್ಲಿ ಯುದ್ಧ ಅಂತ್ಯ?
ನಷ್ಟಕ್ಕೆ ತಿರುಗಿದ್ದ ಕಾರವಾರ ವಾಣಿಜ್ಯ ಬಂದರು
ಕಾರವಾರದ ವಾಣಿಜ್ಯ ಬಂದರಿನಲ್ಲಿ ಕಳೆದ 12 ದಿನದಿಂದ ವಹಿವಾಟ ನಡೆಯದೇ 80 ಲಕ್ಷಕ್ಕೂ ಹೆಚ್ಚು ನಷ್ಟ ತಲುಪಿತ್ತು. ಇದೀಗ ಯುಎಇ ಹಡಗು ಬಂದಿರುವುದರಿಂದ ಒಂದಿಷ್ಟು ಚೇತರಿಕೆ ಕಂಡಿದೆ. ಇದಲ್ಲದೇ ಗುಜರಾತ್‌ನಿಂದ ಸಹ ಹಡಗು ಬಂದಿದ್ದು, ವಾಣಿಜ್ಯ ವಹಿವಾಟು ಚೇತರಿಕೆ ಕಂಡಿತು.

