ಬೆಂಗಳೂರು: ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಮುಂದೆ ಬರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ. ಆಕಾಂಕ್ಷಿಗಳ ಕುರಿತು ಚರ್ಚೆ ಆಗಿದೆ. ಕೋರ್ ಕಮಿಟಿಯಲ್ಲಿ ಚರ್ಚಿಸಿದ ಹೆಸರುಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿಕೊಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯ ಕೋರ್ ಕಮಿಟಿ ಸಭೆಯು ಇಂದು ನಡೆದಿದೆ. ಕರ್ನಾಟಕ ರಾಜ್ಯ ಉಸ್ತುವಾರಿ ಡಾ. ರಾಧಾಮೋಹನ್ ದಾಸ್ ಅಗ್ರವಾಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಪಕ್ಷ ನಾಯಕರು ಮತ್ತು ಎಲ್ಲ ಕೋರ್ ಕಮಿಟಿ ಸದಸ್ಯರು ಭಾಗವಹಿಸಿದ್ದರು ಎಂದರು. ಇದನ್ನೂ ಓದಿ: HN ವ್ಯಾಲಿ, KC ವ್ಯಾಲಿಯಲ್ಲಿ ತೃತೀಯ ಹಂತದ ಸಂಸ್ಕರಣೆ ಯೋಜನೆ ತರಬೇಕು, ಇಲ್ಲದಿದ್ರೆ ಸರ್ಕಾರದ ವಿರುದ್ಧ ಪಾದಯಾತ್ರೆ: ಸಂಸದ ಸುಧಾಕರ್
ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ್ದೇವೆ. ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲ ಒಂದಾಗಿ, ಒಟ್ಟಾಗಿ ಪ್ರಯತ್ನ ಮಾಡಬೇಕು. ಸಂಪೂರ್ಣ ಶ್ರಮ ಹಾಕಬೇಕೆಂದು ಈ ಸಭೆಯಲ್ಲಿ ತೀರ್ಮಾನ ಆಗಿದೆ ಎಂದು ತಿಳಿಸಿದರು. ಪ್ರಹ್ಲಾದ್ ಜೋಶಿ, ಗೋವಿಂದ ಕಾರಜೋಳ ಮತ್ತು ನಾನು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಲ್ಲ ಆಕಾಂಕ್ಷಿಗಳು, ಪಕ್ಷದ ಪ್ರಮುಖರ ಜೊತೆ ಕುಳಿತು ಚರ್ಚಿಸಿ ಹಿಂದೆ ಆಗಿದ್ದನ್ನು ಮರೆತು, ಬದಿಗಿಟ್ಟು ನಾವೆಲ್ಲ ಒಟ್ಟಾಗಿ ಚುನಾವಣೆಯಲ್ಲಿ ಗೆಲ್ಲಲು ಶ್ರಮ ಹಾಕಬೇಕೆಂದು ಆ ಸಭೆ ನಡೆಸಿದ್ದೇವೆ ಎಂದು ಹೇಳಿದರು.
ಒಟ್ಟಾರೆಯಾಗಿ ಕೋರ್ ಕಮಿಟಿಯಲ್ಲಿ ಚರ್ಚೆ ಆದ ಪ್ರಕಾರ ಹೆಸರುಗಳನ್ನು ಇವತ್ತು ಅಥವಾ ನಾಳೆ ದೆಹಲಿಗೆ ಕಳಿಸಿಕೊಡುತ್ತೇವೆ ಎಂದು ತಿಳಿಸಿದರು. ಅಸಮಾಧಾನಿತರಿಗೆ ಏನು ಹೇಳಬೇಕೋ ಅದನ್ನು ನಾಲ್ಕು ಗೋಡೆ ಮಧ್ಯೆ ಹೇಳಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಇದನ್ನೂ ಓದಿ: ಸೋಮವಾರದಿಂದಲೇ ತಂಬಾಕು ಖರೀದಿ: ಹೆಚ್‌ಡಿಡಿ, ಹೆಚ್‌ಡಿಕೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭರವಸೆ
ಎಲ್ಲರನ್ನೂ ಕೂರಿಸಿ ಮಾತನಾಡಿದ್ದೇವೆ. ಹಳೆಯದನ್ನೆಲ್ಲ ಮರೆತು ಪಕ್ಷದ ಹಿತದೃಷ್ಟಿಯಿಂದ ನಾವೆಲ್ಲ ಒಂದಾಗಿ, ಒಟ್ಟಾಗಿ ಕೆಲಸ ಮಾಡಬೇಕು ಎಂಬ ಸಂದೇಶ ಕೊಟ್ಟಿದ್ದೇವೆ ಎಂದರು. ಎರಡೂ ತಂಡದ ಮುಖಂಡರನ್ನು ಕೂರಿಸಿ ಚರ್ಚೆ ಮಾಡಿದ್ದೇವೆ. ಎಲ್ಲವೂ ಸರಿಹೋಗುವ ವಿಶ್ವಾಸ ಇದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

