ವಾಷಿಂಗ್ಟನ್: ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ತನ್ನ ವ್ಯಾಪಾರ ಸಮರಕ್ಕೆ (Trade War) ಹಿನ್ನಡೆಯಾದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ (Donald Trump) ಆಡಳಿತ ಈಗ ಭಾರತ(India) ಸೇರಿದಂತೆ ತನ್ನ 16 ಪಾಲುದಾರ ದೇಶಗಳ ಮೇಲೆ ಅನ್ಯಾಯಯುತ ವ್ಯಾಪಾರ ಅಭ್ಯಾಸ (Unfair Trade Practice) ತನಿಖೆಗೆ ಆದೇಶ ನೀಡಿದೆ.
1974 ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301 ರ ಅಡಿಯಲ್ಲಿ ತನಿಖೆಗಳನ್ನು ನಡೆಸಲಾಗುತ್ತದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್( Jamieson Greer) ಹೇಳಿದ್ದಾರೆ.
ಈ ತನಿಖೆಯು ಈ ಬೇಸಿಗೆಯ ವೇಳೆಗೆ ಚೀನಾ, ಯುರೋಪಿಯನ್ ಒಕ್ಕೂಟ, ಭಾರತ, ಜಪಾನ್, ದಕ್ಷಿಣ ಕೊರಿಯಾ ಮತ್ತು ಮೆಕ್ಸಿಕೊ ವಿರುದ್ಧ ಹೊಸ ಸುಂಕಗಳನ್ನು ವಿಧಿಸಲು ಕಾರಣವಾಗಬಹುದು. ಈ ತನಿಖೆ ವೇಗವಾಗಿ ನಡೆಯಲಿದ್ದು, ಏಪ್ರಿಲ್ 15 ರವರೆಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ಮೇ 5 ರ ಸುಮಾರಿಗೆ ವಿಚಾರಣೆಯನ್ನು ನಿಗದಿಪಡಿಸಲಾಗುವುದು ಎಂದು ಜೇಮಿಸನ್ ಗ್ರೀರ್ ತಿಳಿಸಿದ್ದಾರೆ.
ಒಂದು ದೇಶ ಅನ್ಯಾಯಯುತ ವ್ಯಾಪಾರ ಅಭ್ಯಾಸ ನಡೆಸಿದರೆ ಆ ಪಾಲುದಾರ ದೇಶಗಳ ವಿರುದ್ಧ ಸುಂಕ ಅಥವಾ ಇತರ ಪ್ರತೀಕಾರದ ಕ್ರಮಗಳನ್ನು ವಿಧಿಸಲು ಸೆಕ್ಷನ್ 301 ಅಡಿ ಅಮೆರಿಕ ಸರ್ಕಾರಕ್ಕೆ ಅನುಮತಿ ನೀಡುತ್ತದೆ.
ವ್ಯಾಪಾರ ಸಮರ ನಡೆಯುತ್ತಿದ್ದ ವೇಳೆ ಅಮೆರಿಕದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ಕೆನಡಾದ ಮೇಲೂ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈಗ ಆದೇಶಿಸಿದ 16 ದೇಶಗಳ ತನಿಖಾ ಪಟ್ಟಿಯಲ್ಲಿ ಕೆನಡಾದ ಹೆಸರಿಲ್ಲ. ಇದನ್ನೂ ಓದಿ: ಹಡಗು ಸಂಚರಿಸದಂತೆ ಸಮುದ್ರದಲ್ಲಿ ಸ್ಫೋಟಕ| ಇರಾನ್ ತಂತ್ರಕ್ಕೆ ಟ್ರಂಪ್ ಕೆಂಡಾಮಂಡಲ – ಏನಿದು ನೇವಲ್ ಮೈನ್ಸ್?
ಯಾವ ರಾಷ್ಟ್ರಗಳ ಮೇಲೆ ತನಿಖೆ?
ಏಷ್ಯಾ: ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ, ತೈವಾನ್, ವಿಯೆಟ್ನಾಂ, ಥೈಲ್ಯಾಂಡ್, ಮಲೇಷ್ಯಾ, ಕಾಂಬೋಡಿಯಾ, ಸಿಂಗಾಪುರ, ಇಂಡೋನೇಷ್ಯಾ, ಬಾಂಗ್ಲಾದೇಶ.
ಯುರೋಪ್: ಯುರೋಪಿಯನ್ ಯೂನಿಯನ್, ಸ್ವಿಟ್ಜರ್ಲೆಂಡ್, ನಾರ್ವೆ.
ಉತ್ತರ ಅಮೆರಿಕ: ಮೆಕ್ಸಿಕೊ.
ಈ ತನಿಖೆ ಅಲ್ಲದೇ ಕಾರ್ಮಿಕರಿಂದ ಬಲವಂತವಾಗಿ ಉತ್ಪಾದಿಸಲ್ಪಟ್ಟ ಸರಕುಗಳ ಆಮದನ್ನು ನಿಷೇಧಿಸಲು ಮತ್ತೊಂದು ತನಿಖೆಯನ್ನು ಪ್ರಾರಂಭಿಸುವುದಾಗಿ ಗ್ರೀರ್ ತಿಳಿಸಿದ್ದಾರೆ. ಈ ತನಿಖೆ 60 ಕ್ಕೂ ಹೆಚ್ಚು ದೇಶಗಳ ಮೇಲೆ ನಡೆಯಲಿದೆ. ಇದನ್ನೂ ಓದಿ: ಅಮೆರಿಕದಲ್ಲಿ ರಿಲಯನ್ಸ್‌ನಿಂದ ಹೊಸ ತೈಲ ಸಂಸ್ಕರಣಾ ಘಟಕ: ಟ್ರಂಪ್ ಘೋಷಣೆ
ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರು ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಿಂದ ಆಮದಾಗುವ ಸೌರ ಫಲಕ ಮತ್ತು ಇತರ ಸರಕುಗಳ ಮೇಲೆ ಈ ಹಿಂದೆ ಈ ಕಾಯ್ದೆ ಬಳಸಿ ಕಠಿಣ ಕ್ರಮ ಕೈಗೊಂಡಿದ್ದರು. ಉಯ್ಘರ್ ಮುಸ್ಲಿಮರಿಂದ ಬಲವಂತವಾಗಿ ಸೌರ ಫಲಕಗಳನ್ನು ತಯಾರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಕ್ರಮಕೈಗೊಂಡಿತ್ತು. ಇನ್ನು ಮುಂದೆ ಈ ತನಿಖೆ ಇತರ 60 ದೇಶಗಳಿಗೆ ವಿಸ್ತರಣೆಯಾಗಲಿದೆ.
ಚೀನಾದ ಪಶ್ಚಿಮ ಭಾಗದಲ್ಲಿ ಉಯ್ಘರ್ ಮತ್ತು ಇತರ ಮುಸ್ಲಿಂ ಗುಂಪುಗಳಿಗೆ ಚೀನಾದ ಅಧಿಕಾರಿಗಳು ಕಾರ್ಮಿಕ ಶಿಬಿರಗಳ ಮೂಲಕ ಬಲವಂತವಾಗಿ ಸರಕುಗಳನ್ನು ಉತ್ಪಾದನೆ ಮಾಡಿಸುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿತ್ತು. ಆದರೆ ಚೀನಾ ಅಮೆರಿಕ ಸರ್ಕಾರದ ಆರೋಪಗಳನ್ನು ನಿರಾಕರಿಸಿತ್ತು.

