ರಾಮನಗರ: ಇಸ್ರೇಲ್-ಇರಾನ್ ಯುದ್ಧದ ಎಫೆಕ್ಟ್ (Iran-Israel) ಭಾರತದ ಮೇಲೆ ಒಂದಲ್ಲ ಒಂದು ರೀತಿಯ ಪರಿಣಾಮ ಬೀರುತ್ತಿದೆ. ಗ್ಯಾಸ್, ಪೆಟ್ರೋಲಿಯಂ ಉತ್ಪನ್ನ ಸೇರಿ ಹಲವು ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಇದರ ಜೊತೆಗೆ ಬೊಂಬೆ ಉದ್ಯಮಕ್ಕೂ ಯುದ್ಧದ ಬಿಸಿ ತಟ್ಟಿದ್ದು, ಅಂತಾರಾಷ್ಟ್ರೀಯ ಮಟ್ಟದ ಪ್ರಖ್ಯಾತಿ ಇರೋ ಚನ್ನಪಟ್ಟಣ (Channapatna) ಬೊಂಬೆಗಳ ರಫ್ತಿಗೆ ಅಡ್ಡಿಯಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶದ ಹಲವು ಉದ್ಯಮಗಳಿಗೆ ಸಂಕಷ್ಟ ಎದುರಾಗಿದ್ದು, ವಿಶ್ವಪ್ರಸಿದ್ಧ ಬೊಂಬೆ ಉದ್ಯಮಕ್ಕೂ ತೊಂದರೆ ಉಂಟಾಗಿದೆ. ಅಮೆರಿಕಾ ಸೇರಿ ಹಲವು ಗಲ್ಪ್ ದೇಶಗಳಿಗೆ ಹಡಗುಗಳ ಮೂಲಕ ರಫ್ತಾಗ್ತಿದ್ದ ಬೊಂಬೆಗಳು ಹಾಗೂ ಮರದ ಆಟಿಕೆಗಳು ಕಾರ್ಖಾನೆಯಲ್ಲೇ ಉಳಿಯುವಂತಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರ ಗಲಾಟೆ; ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ
ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್ನಲ್ಲಿ ತಯಾರಾಗುವ ಶೇ.30ರಷ್ಟು ಮರದ ಗೊಂಬೆಗಳು, ಆಟಿಕೆಗಳು ಹಾಗೂ ಇನ್ನಿತರ ಅಲಂಕಾರಿಕ ಕಲಾಕೃತಿಗಳು ವಿದೇಶಕ್ಕೆ ರಫ್ತಾಗುತ್ತವೆ. ಚನ್ನಪಟ್ಟಣದ ಬೊಂಬೆಗಳಿಗೆ ವಿದೇಶದಲ್ಲಿ ಬಾರಿ ಬೇಡಿಕೆ ಇದ್ದು, ಬೇಡಿಕೆಗೆ ತಕ್ಕಂತೆ ತಯಾರಿಕಾ ಕಾರ್ಯ ನಡೆಯುತ್ತದೆ. ಆದರೆ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರೋ ಇಸ್ರೇಲ್-ಇರಾನ್ ಯುದ್ಧದಿಂದ ಬೊಂಬೆ ಆರ್ಡರ್ಗಳ ಸಂಖ್ಯೆ ಇಳಿಕೆಯಾಗಿದೆ.
ಇನ್ನು, ಬೊಂಬೆ ಉದ್ಯಮಿಗಳಿಗೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬರಬೇಕಿದ್ದ ವಿದೇಶಿ ಆರ್ಡರ್ಗಳು ಬಂದಿಲ್ಲ. ಈಸ್ಟರ್, ದಸರಾ, ಕ್ರಿಸ್ಮಸ್ ಹಬ್ಬಗಳಿಗೆ ಇಷ್ಟೊತ್ತಿಗಾಗಲೇ ವಿದೇಶಿ ಗ್ರಾಹಕರು ತಮಗೆ ಬೇಕಾಗುವ ಗೊಂಬೆಗಳು ಹಾಗೂ ಮರದ ಆಕೃತಿಗಳನ್ನ ಆರ್ಡರ್ ಮಾಡ್ತಿದ್ರು. ಆದರೆ ಯುದ್ಧದ ಆತಂಕ ಹಿನ್ನೆಲೆ ಆರ್ಡರ್ ವಿಳಂಬ ಆಗ್ತಿದೆ. ಈಗಾಗಲೇ ಆರ್ಡರ್ ಮಾಡಿರುವ ಗ್ರಾಹಕರು ತಮ್ಮ ಆರ್ಡರ್ ಹೋಲ್ಡ್ ಮಾಡುವಂತೆ ತಿಳಿಸಿದ್ದಾರೆ. ಆರ್ಡರ್ ಹೋಲ್ಡ್ ಆದ್ರೆ ನಾವು ಪ್ರೊಡಕ್ಷನ್ ಕೂಡಾ ನಿಲ್ಲಿಸಬೇಕಾಗುತ್ತೆ. ಅಲ್ಲದೇ ಹಡಗುಗಳ ಮೂಲಕ ನಮ್ಮ ವಸ್ತುಗಳು ರಫ್ತಾಗೋದ್ರಿಂದ ಸಮುದ್ರದಲ್ಲಿ ಸಿಲುಕುವ ಆತಂಕ ಕೂಡಾ ಇದೆ. ಹಾಗಾಗಿ ತಾತ್ಕಾಲಿಕವಾಗಿ ರಫ್ತು ನಿಲ್ಲಿಸಿದ್ದೇವೆ ಎಂದು ಗೊಂಬೆ ಉದ್ಯಮಿ ತಿಳಿಸಿದ್ದಾರೆ.
ಒಟ್ಟಾರೆ ಇಸ್ರೇಲ್-ಇರಾನ್ ಯುದ್ಧದ ಎಫೆಕ್ಟ್ ಭಾರತದ ಹಲವು ಉದ್ಯಮಗಳಿಗೆ ಸಂಕಷ್ಟ ತಂದೊಡ್ಡಿದ್ದು, ಯುದ್ಧ ಮುಗಿಯುವವರೆಗೂ ಅಡಚಣೆಗಳನ್ನ ಎದುರಿಸಬೇಕಿದೆ.ಇದನ್ನೂ ಓದಿ: ಮಧ್ಯಪ್ರಾಚ್ಯ ಯುದ್ಧ ವಿಚಾರವನ್ನ ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ: ಮೋದಿ ಕಿಡಿ

