– ಫ್ಯಾನ್ಸ್‌ಗೆ ಗೊತ್ತಾಗದಂತೆ ಕ್ರಿಕೆಟರ್‌ನ ಕರೆತರಲು ಪತ್ನಿ ಮಾಡಿದ ಪ್ಲ್ಯಾನ್ ಏನು ಗೊತ್ತಾ?
ಮುಂಬೈ: ಐಸಿಸಿ ಟಿ20 ವಿಶ್ವಕಪ್ (T20 World Cup) ಟ್ರೋಫಿ ಗೆದ್ದ ಬಳಿಕ ಟೀಂ ಇಂಡಿಯಾ ಆಲ್‌ರೌಂಡರ್ ಶಿವಂ ದುಬೆ (Shivam Dube) ತಮ್ಮ ಪತ್ನಿ ಹಾಗೂ ಸ್ನೇಹಿತರೊಟ್ಟಿಗೆ ಅಹಮದಾಬಾದ್‌ನಿಂದ ಮುಂಬೈಗೆ ರೈಲಿನ ಮೂಲಕ ಪ್ರಯಾಣ ಬೆಳಸಿದ ವಿಚಾರ ಬೆಳಕಿಗೆ ಬಂದಿದೆ.
ಶಿವಂ ದುಬೆ 2026 ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತ ಪರ ಅತ್ಯುತ್ತಮ ಪ್ರದರ್ಶನ ನೀಡಿದವರಲ್ಲಿ ಒಬ್ಬರು. ಅವರು ವಿಶ್ವದ ನಂ.1 ಟಿ20ಐ ತಂಡಕ್ಕಾಗಿ ಎಲ್ಲಾ ಒಂಬತ್ತು ಪಂದ್ಯಗಳನ್ನು ಆಡಿದರು. ಐದು ವಿಕೆಟ್‌ಗಳನ್ನು ಕಬಳಿಸುವುದರ ಜೊತೆಗೆ 235 ರನ್ ಗಳಿಸಿದರು. ಮಾ.8 ರ ಭಾನುವಾರ ಅಹಮದಾಬಾದ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಫೈನಲ್ ಪದ್ಯಂದಲ್ಲಿ ದುಬೆ ಕೇವಲ 8 ಎಸೆತಗಳಲ್ಲಿ 26 ರನ್ ಗಳಿಸಿದರು. ಆ 26 ರನ್‌ಗಳಲ್ಲಿ ಅವರು 20 ನೇ ಓವರ್‌ನಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಭಾರತದ ಒಟ್ಟು ಮೊತ್ತಕ್ಕೆ 24 ರನ್‌ಗಳನ್ನು ಸೇರಿಸಿದರು. ಭಾರತ ದಾಖಲೆಯ ಮೂರನೇ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲಲು ದೊಡ್ಡ ಪಾತ್ರ ವಹಿಸಿದರು. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಂಪರ್; 131 ಕೋಟಿ ಬಹುಮಾನ ಘೋಷಿಸಿದ BCCI
ಅಹಮದಾಬಾದ್‌ನಿಂದ ಮುಂಬೈಗೆ ಹೋಗುವ ಎಲ್ಲಾ ವಿಮಾನಗಳು ಬುಕ್ ಆಗಿದ್ದರಿಂದ ಶಿವಂ ದುಬೆ ರೈಲಿನ ಮೂಲಕ ಪ್ರಯಾಣಿಸಲು ನಿರ್ಧರಿಸಿದರು. ರೈಲಿನಲ್ಲಿ ಪ್ರಯಾಣಿಸಿದರೆ ಅಭಿಮಾನಿಗಳಿಂದ ಕಿರಿಕಿರಿ ಅನುಭವಿಸಬಹುದು ಎನ್ನಲಾಗಿತ್ತು. ಆದರೆ, ಅವರು ಮುಂಬೈನಲ್ಲಿ ಮನೆಯಲ್ಲಿದ್ದ ತಮ್ಮ ನಾಲ್ಕು ವರ್ಷದ ಮಗ ಅಯಾನ್ ಮತ್ತು ಎರಡು ವರ್ಷದ ಮಗಳು ಮೆಹ್ವಿಶ್ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದರು. ಹೀಗಾಗಿ, ಯಾವುದೇ ತೊಂದರೆಯನ್ನು ಸ್ವೀಕರಿಸಲು ನಿರ್ಧರಿಸಿ, ಕೊನೆಗೆ ರೈಲಿನಲ್ಲೇ ಪ್ರಯಾಣಿಸಿದರು.
‘ಯಾವುದೇ ವಿಮಾನ ಲಭ್ಯವಿರಲಿಲ್ಲ, ಆದ್ದರಿಂದ ನಾನು ಬೆಳಿಗ್ಗೆ ಅಹಮದಾಬಾದ್‌ನಿಂದ ಮುಂಬೈಗೆ ರೈಲಿನಲ್ಲಿ ಹೋಗಲು ನಿರ್ಧರಿಸಿದೆ. ನಾವು ರಸ್ತೆಯ ಮೂಲಕವೂ ಹೋಗಬಹುದಿತ್ತು. ಆದರೆ, ರೈಲಿನಲ್ಲಿ ಬೇಗ ತಲುಪಬಹುದೆಂದು ಈ ನಿರ್ಧಾರ ಮಾಡಿದೆ. ಯಾರೂ ಗುರುತಿಸಬಾರದೆಂದು ನಾನು ಕ್ಯಾಪ್, ಮಾಸ್ಕ್ ಮತ್ತು ಪೂರ್ಣ ತೋಳಿನ ಟಿ-ಶರ್ಟ್ ಧರಿಸಿದ್ದೆ. ಅದು ಬೆಳಗ್ಗೆ 5:10 ರ ರೈಲು, ಆದ್ದರಿಂದ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಜನರು ಇರುವುದಿಲ್ಲ ಎಂದು ನಾವು ಭಾವಿಸಿ ಟಿಕೆಟ್ ಬುಕ್ ಮಾಡಿದ್ದೆವು’ ಎಂದು ಮಾಧ್ಯಮವೊಂದಕ್ಕೆ ದುಬೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಸಿಕ್ಸರ್‌ನಲ್ಲಿ ಶತಕ ಹೊಡೆದು ವಿಶ್ವದಾಖಲೆ – ಯಾರು ಎಷ್ಟು ಸಿಕ್ಸ್?
ಯಾರಿಗೂ ತಿಳಿಯದಂತೆ ದುಬೆ ರೈಲು ಹತ್ತಿದ ಬಳಿಕ ಟಿಟಿಇ ಟಿಕೆಟ್ ಚೆಕ್ ಮಾಡಲು ಬಂದಿದ್ದರು. ಆಗ, ಶಿವಂ ದುಬೆ ಎಂದು ಪತ್ನಿ ಹೆಸರನ್ನು ಹೇಳಿದ್ದಾರೆ. ‘ಕ್ರಿಕೆಟರ್ ಶಿವಂ ದುಬೆ ಅವರೇ’ ಅಂತ ಟಿಟಿಇ ಪ್ರಶ್ನಿಸಿದ್ದಾರೆ. ಅದಕ್ಕೆ ದುಬೆ ಪತ್ನಿ, ‘ಇಲ್ಲ.. ಕ್ರಿಕೆಟರ್ ಯಾಕೆ ಇಲ್ಲಿಗೆ ಬರುತ್ತಾರೆ’ ಎಂದು ಚಾಣಾಕ್ಷತನದಿಂದ ಮಾತನಾಡಿ, ಅಭಿಮಾನಿಗಳ ಕಿರಿಕಿರಿಯಾಗದಂತೆ ಪತಿಯನ್ನು ಪಾರು ಮಾಡಿದ್ದಾರೆ.

