– ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದಿಂದ ಮಾಹಿತಿ
ನವದೆಹಲಿ: ಎನ್‌ಸಿಇಆರ್‌ಟಿ ಪುಸ್ತಕಗಳಲ್ಲಿ (NCERT Textbook Row) ನ್ಯಾಯಾಂಗದ ಕುರಿತು ವಿವಾದಾಸ್ಪದ ಉಲ್ಲೇಖ ಹಿನ್ನೆಲೆ ಕೇಂದ್ರ ಸರ್ಕಾರವು ಗಂಭೀರ ನಿಲುವು ತೆಗೆದುಕೊಂಡಿದ್ದು, ಎನ್‌ಸಿಇಆರ್‌ಟಿ ಎಲ್ಲಾ ತರಗತಿಗಳ ಪುಸ್ತಕಗಳನ್ನು ಸಮೀಕ್ಷೆ ಮಾಡಲು ಸರ್ಕಾರ ಆದೇಶ ನೀಡಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ಮಾಹಿತಿ ನೀಡಿದೆ. ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತಜ್ಞರ ಸಮಿತಿಯನ್ನು ರಚಿಸಿ ಪಠ್ಯಕ್ರಮವನ್ನು ಪರಿಶೀಲಿಸುವುದಾಗುವುದು ಎಂದು ವಿವರಿಸಿದ್ದಾರೆ.
ಎಂಟನೇ ತರಗತಿಯ ಸಾಮಾಜ ವಿಜ್ಞಾನ ಪುಸ್ತಕದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಎಂಬ ಪಾಠ ಸೇರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ವಿಷಯವು ನ್ಯಾಯಾಂಗದ ಘನತೆಗೆ ಧಕ್ಕೆ ತರುವಂತಹದ್ದು ಎಂದು ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ, ಪುಸ್ತಕದ ಮುದ್ರಣ, ವಿತರಣೆ ಮತ್ತು ಡಿಜಿಟಲ್ ಪ್ರಸಾರಕ್ಕೆ ಸಂಪೂರ್ಣ ನಿಷೇಧ ಹೇರಿತು. ಎಲ್ಲಾ ಭೌತಿಕ ಪ್ರತಿಗಳನ್ನು ವಶಪಡಿಸಿಕೊಳ್ಳುವಂತೆಯೂ ಆದೇಶಿಸಿತು. ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೋಸ್ ವೀಲ್‌ನಲ್ಲಿ ದೋಷ – ತಪ್ಪಿದ ಭಾರೀ ದುರಂತ

ಇಂದು ನಡೆದ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೋರ್ಟ್‌ಗೆ ಮಾಹಿತಿ ನೀಡಿ, ಕೇಂದ್ರ ಸರ್ಕಾರವು ಎನ್‌ಸಿಇಆರ್‌ಟಿಗೆ ಎಲ್ಲಾ ತರಗತಿಗಳ ಪುಸ್ತಕಗಳ ಸಮೀಕ್ಷೆಗೆ ಸೂಚನೆ ನೀಡಿದೆ. ಸ್ವತಂತ್ರ ಮತ್ತು ನಿಷಕ್ಪಪಾತ ತಜ್ಞರ ಸಮಿತಿ ರಚಿಸಲಾಗುತ್ತಿದ್ದು, ಇನ್ಮುಂದೆ ಯಾವುದೇ ಹೊಸ ವಿಷಯವನ್ನು ವಿಶೇಷ ತಜ್ಞರ ಅನುಮೋದನೆ ಇಲ್ಲದೆ ಪ್ರಕಟಿಸಲಾಗುವುದಿಲ್ಲ ಎಂದು ಹೇಳಿದರು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿ ಸದಸ್ಯ ಪೀಠ, ಪುಸ್ತಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು. ಪುಸ್ತಕದಲ್ಲಿ ಬರೆದಿರುವ ವಿಷಯ ನ್ಯಾಯಾಂಗದ ಮೇಲೆ ಗುಂಡು ಹಾರಿಸಿದಂತೆ ಮತ್ತು ಸಂಸ್ಥೆಗೆ ಆಳವಾದ ಗಾಯ ಮಾಡಿದೆ ಎಂದು ಹೇಳಿತು. ಇದನ್ನು ನ್ಯಾಯಾಂಗದ ಘನತೆಯನ್ನು ಕುಗ್ಗಿಸುವ ಸಂಚು ಎಂದು ಹೇಳಿತು. ಇದನ್ನೂ ಓದಿ: ಹಡಗು ಸಂಚರಿಸದಂತೆ ಸಮುದ್ರದಲ್ಲಿ ಸ್ಫೋಟಕ| ಇರಾನ್ ತಂತ್ರಕ್ಕೆ ಟ್ರಂಪ್ ಕೆಂಡಾಮಂಡಲ – ಏನಿದು ನೇವಲ್ ಮೈನ್ಸ್?
ಸರ್ಕಾರವು ವಿಶೇಷ ತಜ್ಞರ ಸಮಿತಿಯನ್ನು ರಚಿಸಿ ಪಠ್ಯಕ್ರಮದ ಸಮೀಕ್ಷೆ ಮಾಡಿದರೆ ಒಳ್ಳೆಯದು ಎಂದು ಕೋರ್ಟ್ ಹೇಳಿತು. ಇದೇ ವೇಳೆ ಎನ್‌ಸಿಇಆರ್‌ಟಿ ನಿರ್ದೇಶಕರು ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿ ಕ್ಷಮಾಪಣೆ ಕೇಳಿದರು. ಪುಸ್ತಕವನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ ಎಂದು ತಿಳಿಸಿದರು.

