ನವದೆಹಲಿ: ದೇಶಾದ್ಯಂತ `ಏಕರೂಪ ನಾಗರಿಕ ಸಂಹಿತೆ’ ಜಾರಿಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ದೇಶದ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ಏಕೈಕ ಮಾರ್ಗವೆಂದರೆ ದೇಶಾದ್ಯಂತ ಯುಸಿಸಿ ಜಾರಿಗೆ ತರುವುದು ಎಂದಿದೆ.
ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅಡಿಯಲ್ಲಿ ಮಹಿಳೆಯರ ಹಕ್ಕುಗಳ ಉಲ್ಲಂಘನೆಯನ್ನು ಆರೋಪಿಸಿ ಒಂದು ಬ್ಯಾಚ್ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸಿಜೆ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಆರ್ ಮಹದೇವನ್ ಮತ್ತು ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.
ಮುಸ್ಲಿಂ ಸಮಾಜದ ಒಂದು ದೊಡ್ಡ ವರ್ಗವು ಸಮಾನ ಉತ್ತರಾಧಿಕಾರದ ಹಕ್ಕುಗಳಿಂದ ವಂಚಿತವಾಗಿದೆ ಎಂಬುದು ನಿಜ. ಆದರೆ, ಶರಿಯಾ ಕಾನೂನಿನ ಉತ್ತರಾಧಿಕಾರದ ನಿಬಂಧನೆಯನ್ನು ತೆಗೆದುಹಾಕಿದರೆ, ನಂತರ ಯಾವ ಕಾನೂನು ಉತ್ತರಾಧಿಕಾರವನ್ನು ನಿಯಂತ್ರಿಸಬೇಕು..? ಏಕರೂಪ ನಾಗರಿಕ ಸಂಹಿತೆ ಸರಿಯಾದ ಉತ್ತರವಾಗಿದೆ ಎಂದರು.
ಅರ್ಜಿದಾರರ ಪರ ವಾದಿಸಿದ ವಕೀಲ ಪ್ರಶಾಂತ್ ಭೂಷಣ್, ಧಾರ್ಮಿಕ ಸ್ವಾತಂತ್ರ‍್ಯವನ್ನು ಖಾತರಿಪಡಿಸುವ ಸಂವಿಧಾನದ 25ನೇ ವಿಧಿಯಡಿ ಉತ್ತರಾಧಿಕಾರಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನನ್ನು ರಕ್ಷಿಸಲಾಗುವುದಿಲ್ಲ. ಮುಸ್ಲಿಂ ಮಹಿಳೆಯರಿಗೆ ಮುಸ್ಲಿಂ ಪುರುಷರಿಗೆ ಇರುವಂತೆ ಸಮಾನವಾದ ಹಕ್ಕುಗಳು ಇರುವುದಿಲ್ಲ ಎಂದು ಹೇಳಿದರು.
ವಾದಗಳನ್ನು ಆಲಿಸಿದ ನ್ಯಾಯಾಲಯವು, ಶರಿಯತ್ ಉತ್ತರಾಧಿಕಾರದ ನಿಬಂಧನೆಗಳನ್ನು ರದ್ದುಗೊಳಿಸಿದರೆ ಪರಿಹಾರಗಳೇನು..? ಎಂಬ ಸಲಹೆಗಳನ್ನು ಸೇರಿಸಲು ಅರ್ಜಿಯನ್ನು ತಿದ್ದುಪಡಿ ಮಾಡಲು ಸೂಚಿಸಿತು. ಭೂಷಣ್ ಅವರು ಅರ್ಜಿಯನ್ನು ತಿದ್ದುಪಡಿ ಮಾಡಲು ಒಪ್ಪಿದ ನಂತರ ಪೀಠವು ಮುಂದಿನ ವಿಚಾರಣೆಯನ್ನು ಮತ್ತೊಂದು ದಿನಾಂಕಕ್ಕೆ ಮುಂದೂಡಿತು.

