ಅಮೆರಿಕ (America), ಇಸ್ರೇಲ್ (Israel) ಹಾಗೂ ಇರಾನ್ (Iran) ಯುದ್ಧದಲ್ಲಿ ಪರಸ್ಪರ ಬಲಾಬಲ ಪ್ರದರ್ಶನ ನಡೆಯುತ್ತಿದೆ. ಈ ಯುದ್ಧದಲ್ಲಿ ಮನುಷ್ಯ, ಮಿಸೈಲ್, ಯುದ್ಧ ವಿಮಾನಗಳಿಗೂ ಮೀರಿ ಎಐ ಕೆಲಸ ಮಾಡುತ್ತಿದೆ. ಹೌದು ನಾಗರಿಕತೆ ಮಂದುವರೆದಂತೆ ಯುದ್ಧದ ಸ್ವರೂಪಗಳು ಬದಲಾಗುತ್ತಿದೆ. ಈಗ ರಣರಂಗದಲ್ಲಿ ಎಐ ಸರದಿ. ಮುಂದೆ ಎಐ ತಂತ್ರಜ್ಞಾನದಲ್ಲಿ ಹಿಂದಿರುವ ರಾಷ್ಟ್ರಗಳು ಯುದ್ಧದಲ್ಲಿ ಸೋಲುವ ಎಲ್ಲಾ ಸಾಧ್ಯತೆಗಳಿವೆ.
2025ರಲ್ಲೇ ಎಐ ಬಳಸಿ ಇಸ್ರೇಲ್ ದಾಳಿ
2025ರಲ್ಲಿ ಇರಾನ್‌ನ ವಾಯಪ್ರದೇಶಕ್ಕೆ ನುಗ್ಗಿದ ಇಸ್ರೇಲ್‌ನ ವಿಮಾನವೊಂದು ಅಣುಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ದಾಳಿಯ ಸಮಯ, ಸ್ಥಳವನ್ನು ನಿರ್ಧರಿಸಿದ್ದು ಪೈಲಟ್ ಅಲ್ಲ. ಆ ಕಾರ್ಯ ನಿರ್ವಹಿಸಿದ್ದು ಕಂಪ್ಯೂಟರ್! ಎಐ ವ್ಯವಸ್ಥೆ ಟಾರ್ಗೆಟ್ ಆಯ್ಕೆ ಮಾಡಿ, ದಾಳಿಗೆ ಕಮಾಂಡ್ ನೀಡಿತ್ತು. ಅದೇ ಮಾಹಿತಿ ಆಧಾರದ ಮೇಲೆ ದಾಳಿ ನಡೆದಿತ್ತು.

ರಣರಂಗದಲ್ಲಿ ಎಐ ಮಹಾ ಅಸ್ತ್ರ
ಮಿಲಿಟರಿ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಹೆಚ್ಚು ಹೆಚ್ಚು ಬೆಳೆಯುತ್ತಿದೆ. ಅಮೆರಿಕ ಮಿಲಿಟರಿಯು ಕೇವಲ ಎರಡು ವರ್ಷಗಳಲ್ಲಿ ಎ.ಐ ಮೇಲೆ 180 ಕೋಟಿ ರೂ. ಖರ್ಚು ಮಾಡಿದೆ. ಎಐ ಮೂಲಸೌಕರ್ಯ ನಿರ್ಮಿಸಲು 41 ಲಕ್ಷ ಕೋಟಿ ರೂ.ಗೂ ಅಧಿಕ ಯೋಜನೆಯನ್ನು ಇದೇ ವರ್ಷ ಜನವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಶಕ್ತಿಶಾಲಿಯಾದ ಎಐ ಪಡೆ ನಿರ್ಮಿಸಲು ಅಮೆರಿಕ ಸೇರಿ ಪ್ರತಿಯೊಂದು ದೇಶವೂ ಯತ್ನಿಸುತ್ತಿವೆ.

24 ಗಂಟೆಗಳಲ್ಲೇ 1000 ಟಾರ್ಗೆಟ್
ಫೆ.28 ರಂದು ಅಮೆರಿಕ ಮತ್ತು ಇಸ್ರೇಲ್ ಸೇರಿ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಭಾರಿ ವೈಮಾನಿಕ ದಾಳಿ ಎಐನ ಶಕ್ತಿಯನ್ನು ಪರಚಯಿಸಿತು. ಕೇವಲ 24 ಗಂಟೆಗಳಲ್ಲಿ1,000 ಗುರಿಗಳ ಮೇಲೆ ದಾಳಿ ನಡೆಸಲಾಯಿತು. ಇರಾನ್ ರಾಜಧಾನಿ ಟೆಹ್ರಾನ್, ಟೆಹ್ರಾನ್, ಕ್ವಾಮ್ ಮತ್ತು ಇತರ ನಗರಗಳ ಮೇಲೆ ಬಾಂಬ್‌ಗಳ ಮಳೆಗರೆಯಲಾಗಿತು. ಒಂದೇ ದಿನದಲ್ಲಿ ಇಷ್ಟು ದೊಡ್ಡ ಗುರಿಯನ್ನು ಹುಡುಕಿ ದಾಳಿ ಮಾಡಲು ಮನುಷ್ಯನಿಂದ ಸಾಧ್ಯವೇ ಇಲ್ಲ. ಇದನ್ನು ಎಐ ಬಳಸಿ ಸುಲಭವಾಗಿ ಮಾಡಲಾಯಿತು.
ಈ ಕಾರ್ಯಾಚರಣೆ ನಡೆಸಲು ಅಮೆರಿಕ ಸೇನೆಯು ಆಂಥ್ರೋಪಿಕ್ ಕಂಪನಿ ಸಿದ್ಧಪಡಿಸಿದ ‘ಕ್ಲಾಡ್’ ಎನ್ನುವ ಎಐ ತಂತ್ರಜ್ಞಾನ ಬಳಸಿತ್ತು. ಗುಪ್ತಚರ ವರದಿಗಳಲ್ಲಿನ ಮಾಹಿತಿ ವಿಶ್ಲೇಷಿಸಿದ ಕ್ಲಾಡ್, ಯಾವ ಟಾರ್ಗೆಟ್ ಮೇಲೆ ದಾಳಿ ನಡೆಸಬೇಕು ಎಂದು ನಿರ್ಧರಿಸಿತು. ಇದು ಸೇನೆಯ ಕೆಲಸವನ್ನು ಬಹಳ ಸರಳಗೊಳಿಸಿತು. ಅಂದ ಹಾಗೆ ಇದು ನಾವು ನೀವು ದಿನನಿತ್ಯ ಕೆಲಸ ಕಾರ್ಯದಲ್ಲಿ ಬಳಸುವ ತಂತ್ರಜ್ಞಾನವೇ ಆಗಿದ್ದು, ಅಮೆರಿಕ ಯುದ್ಧದಲ್ಲಿ ಬಳಕೆ ಮಾಡಿಕೊಂಡಿತ್ತು.

ಇಸ್ರೇಲ್ ಕೂಡ ‘ಲಾವೆಂಡರ್’ ಎನ್ನುವ ತನ್ನದೇ ಆದ ಎಐ ತಂತ್ರಜ್ಞಾನ ಬಳಸಿತ್ತು. ಇದು ಜನರ ನಡವಳಿಕೆ, ಆನ್‌ಲೈನ್ ಚಟುವಟಿಕೆಗಳನ್ನು ಅಧ್ಯಯನ ಮಾಡಿ, ಅವರು ಮಿಲಿಟರಿ ಗುರಿಗಳೇ ಅಥವಾ ಅಲ್ಲವೇ ಎಂದು ಪತ್ತೆ ಮಾಡಿತ್ತು. ಇದರಿಂದ ಭಾರೀ ವೇಗವಾಗಿ ದಾಳಿ ನಡೆಸಬೇಕಾದ ಟಾರ್ಗೆಟ್ ಪಟ್ಟಿ ತಯಾರಾಗಿತ್ತು.
ಈ ದಾಳಿಯಿಂದ ಸುಮಾರು 2,100 ಇರಾನಿ ಸೈನಿಕರು ಮತ್ತು 40 ಹಿರಿಯ ಅಧಿಕಾರಿಗಳು ಸಾವಿಗೀಡಾಗಿದ್ದರು. ಪ್ರತೀಕಾರವಾಗಿ ಜೋರ್ಡಾನ್ ಮತ್ತು ಯುಎಇಯಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿತು. ಜೊತೆಗೆ ಅಮೆರಿಕ ಸೇನೆಗೆ ಕ್ಲೌಡ್ ಸೇವೆಗಳನ್ನು ಒದಗಿಸುವ ಕಂಪನಿಯ ಡೇಟಾ ಸೆಂಟರ್ ಮೇಲೆ ದಾಳಿ ನಡೆಸಿತ್ತು.
ಕ್ಲಾಡ್ ಬಳಕೆ ನಿಷೇಧಕ್ಕೆ ಆದೇಶಿಸಿದ್ದ ಟ್ರಂಪ್
ಈ ದಾಳಿಗೆ ಮುನ್ನ ಇತ್ತೀಚೆಗೆ ಆಂಥ್ರೋಪಿಕ್ ಕಂಪನಿ ಜೊತೆಗಿನ ಒಪ್ಪಂದಗಳನ್ನು ರದ್ದುಪಡಿಸಿದ್ದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಈ ಸಂಸ್ಥೆಯನ್ನು ತೀವ್ರವಾಗಿ ಟೀಕಿಸಿದ್ದ ಟ್ರಂಪ್, ಫೆಡರಲ್ ಏಜೆನ್ಸಿಗಳಿಗೆ ಕ್ಲಾಡ್ ಬಳಕೆ ನಿಲ್ಲಿಸಲು ಸೂಚಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲೇ ಈ ತಂತ್ರಜ್ಞಾನವನ್ನು ದಾಳಿಯಲ್ಲಿ ಉಪಯೋಗಿಸಲಾಗಿದೆ.

ಎಲ್ಲವನ್ನೂ ಬದಲಾಯಿಸಿದ್ದ ಕ್ಯಾಮೆರಾ
ಇಸ್ರೇಲಿ ಗುಪ್ತಚರ ವ್ಯವಸ್ಥೆ ಕಳೆದ ಹಲವಾರು ವರ್ಷಗಳಿಂದ ಟೆಹ್ರಾನಿನ ಬಹುತೇಕ ಎಲ್ಲ ಟ್ರಾಫಿಕ್ ಕ್ಯಾಮೆರಾಗಳ ಮೇಲೆ ನಿಯಂತ್ರಣ ಸಾಧಿಸಿತ್ತು. ಇವುಗಳ ಪೈಕಿ ಒಂದು ಕ್ಯಾಮೆರಾ ಅತ್ಯಂತ ಉಪಯುಕ್ತವಾದ ಚಿತ್ರಣವನ್ನು ಒದಗಿಸುತ್ತಿತ್ತು. ಅತ್ಯಂತ ಕಟ್ಟುನಿಟ್ಟಿನ ಭದ್ರತೆ ಹೊಂದಿದ್ದ ಖಮೇನಿ ಕಟ್ಟಡದ ಒಂದು ಮುಖ್ಯ ಭಾಗದ ಒಳಗಿನ ಮಾಹಿತಿ ನೀಡಿತ್ತು. ಹೀಗೆ ಹತ್ಯೆಗೀಡಾದ ಖಮೇನಿ ಮೇಲೆ ಇಸ್ರೇಲ್ ನಿಗಾ ಇಟ್ಟಿತ್ತು.
ಎಐ ಯುದ್ಧಕ್ಕೆ ಮೊದಲು ಬಳಕೆಯಾಗಿದ್ದು ಎಲ್ಲಿ ಗೊತ್ತಾ?
ಎಐ ತಂತ್ರಜ್ಞಾನವನ್ನು ಯುದ್ಧಕ್ಕೂ ಬಳಸಬಹುದು ಎಂಬುದನ್ನು ಜಗತ್ತಿಗೆ ಮೊದಲು ತೋರಿಸಿದ್ದು ಉಕ್ರೇನ್. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಂಭವಿಸುವ ಶೇ 70-80 ರಷ್ಟು ಸಾವುಗಳಿಗೆ ಡ್ರೋನ್ ದಾಳಿಯೇ ಕಾರಣ. ಎಐ ತಂತ್ರಜ್ಞಾನ ಬಳಕೆಗೂ ಮೊದಲು ಡ್ರೋನ್ ದಾಳಿಗಳು ಶೇ 30-50ರಷ್ಟು ಮಾತ್ರ ಯಶಸ್ವಿಯಾಗುತ್ತಿದ್ದವು. ಎಐ ಬಳಕೆಯಿಂದ ಈಗ ಅದರ ನಿಖರತೆ ಶೇ 80 ಕ್ಕೆ ಏರಿದೆ. ಈ ಪೈಕಿ ಕೆಲವು ಎಐ ಪರಿಕರಗಳ ಬೆಲೆ ₹ 2500 3500 ಮಾತ್ರ!
ಉಕ್ರೇನ್ ನಿರ್ಮಿಸಿರುವ ‘ಡೆಲ್ಟಾ’ ಎನ್ನುವ ಎಐ ವ್ಯವಸ್ಥೆಯು ಉಪಗ್ರಹಗಳು, ಸೆನ್ಸಾರ್‌ಗಳು, ಡ್ರೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಕೆಲವೇ ನಿಮಿಷಗಳಲ್ಲಿ ಅದನ್ನು ಅಧಿಕಾರಿಗಳಿಗೆ ನೀಡುತ್ತದೆ. ನೂರಾರು ಜನ ಮಾಡಬೇಕಿದ್ದ ಕೆಲಸವನ್ನು ಈಗ ಸಾಫ್ಟ್‌ವೇರ್ ಕ್ಷಣಮಾತ್ರದಲ್ಲಿ ಮಾಡುತ್ತದೆ.
ಇದೆಲ್ಲ ಗಮನಿಸಿದರೆ ಮುಂದೆ ರಕ್ಷಣಾ ವ್ಯವಸ್ಥೆಯಲ್ಲಿ ಎಐ ಪ್ರಮುಖ ಪಾತ್ರವಹಿಸುವ ಲಕ್ಷಣಗಳು ಗೋಚರಿಸುತ್ತಿದೆ. ಇದು ಆಯುಧಗಳಿಗಿಂತಲೂ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಸಹ ಇದೆ.

