ಮೂರುವರೆ ದಿನದಲ್ಲಿ 46 ಹಡಗುಗಳು ನಾಶ: ಟ್ರಂಪ್
ವಾಷಿಂಗ್ಟನ್: ಇರಾನ್ (Iran) ಹಡಗುಗಳನ್ನು ವಶಪಡಿಸಿಕೊಂಡು ಬಳಸೋದಕ್ಕಿಂತ ಮುಳುಗಿಸೋದೆ ನಮಗೆ ಮಜಾ ಎಂದು ಅಮೆರಿಕ ಸೇನೆ ಹೇಳಿಕೊಂಡಿದೆ. ಈ ಬಗ್ಗೆ ಡೋರಲ್‌ನಲ್ಲಿ ನಡೆದ ನ್ಯಾಷನಲ್ ರಿಪಬ್ಲಿಕನ್ ಸಭೆಯಲ್ಲಿ ಅಮೆರಿಕ ಅಧ್ಯಕ್ಷ್ಯ ಡೊನಾಲ್ಡ್ ಟ್ರಂಪ್ (Donald Trum) ಮಾಹಿತಿ ಹಂಚಿಕೊಂಡಿದ್ದಾರೆ.
ಅಮೆರಿಕ (America) ಮತ್ತು ಇಸ್ರೇಲ್ (Israel) ನಡೆಸುತ್ತಿರುವ ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯಲ್ಲಿ ಇರಾನ್‌ನ ನೌಕಾಪಡೆಗೆ ಭಾರಿ ಹೊಡೆತ ಬಿದ್ದಿದೆ. ಅಮೆರಿಕನ್ ನೌಕಾಪಡೆಯು ಕೇವಲ ಮೂರುವರೆ ದಿನಗಳಲ್ಲಿ 46 ಇರಾನ್ ನೌಕಾಪಡೆಯ ಹಡಗುಗಳನ್ನು ಮುಳುಗಿಸಿದೆ. ಇದನ್ನೂ ಓದಿ: ನಾವು ಈಗಾಗಲೇ ಗೆದ್ದಿದ್ದೇವೆ, ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬಹುದು: ಟ್ರಂಪ್
ಸೇನೆಯ ಅಧಿಕಾರಿಗಳೊಂದಿಗಿನ ಸಂಭಾಷಣೆಯನ್ನು ಈ ವೇಳೆ ಅವರು ಹಂಚಿಕೊಂಡರು. ಇರಾನ್‌ನ ಹಡಗುಗಳು ಉತ್ತಮ ಗುಣಮಟ್ಟದವು ಅವುಗಳನ್ನು ಏಕೆ ವಶಕ್ಕೆ ಪಡೆದು ಬಳಸಬಾರದು? ಅವುಗಳನ್ನು ನಾವು ಬಳಸಬಹುದಿತ್ತು. ಏಕೆ ಮುಳುಗಿಸಿದ್ದೀರಿ? ಎಂದು ನಾನು ಕೇಳಿದೆ. ಸೈನಿಕರು ಅದಕ್ಕೆ, ಅವುಗಳನ್ನು ಮುಳುಗಿಸುವುದೇ ಹೆಚ್ಚು ಮಜಾ ಕೊಡುತ್ತದೆ ಎಂದು ಉತ್ತರಿಸಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ.
ಸೈನಿಕರು ಇರಾನ್ ಹಡಗುಗಳನ್ನು ಮುಳುಗಿಸುವುದನ್ನೇ ಇಷ್ಟಪಡುತ್ತಾರೆ. ಅದು ಹೆಚ್ಚು ಸುರಕ್ಷಿತ ಎಂದು ಹೇಳುತ್ತಾರೆ. ಬಹುಶಃ ಅದು ಸರಿಯೇ ಇರಬಹುದು ಎಂದು ಟ್ರಂಪ್ ಹಾಸ್ಯಾಸ್ಪದವಾಗಿ ಹೇಳಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿ ಸಾಮರ್ಥ್ಯವೂ ಸಂಪೂರ್ಣವಾಗಿ ನಾಶವಾಗುತ್ತಿದೆ. ಇರಾನ್ ಸೇನೆಗೆ ಸಂಪೂರ್ಣವಾಗಿ ಸೋಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಯುದ್ಧ ನಿಲ್ಲಿಸೋ ನಿರ್ಧಾರ ಅಮೆರಿಕದ್ದಲ್ಲ, ನಮ್ಮದು – ದಾಳಿ ಮುಂದುವರಿದ್ರೆ 1 ಲೀಟರ್ ತೈಲವೂ ಸಿಗಲ್ಲ: ಇರಾನ್

