ವಾಷಿಂಗ್ಟನ್: ಅಮೆರಿಕ (America) ಹಾಗೂ ಇಸ್ರೇಲ್‌ಗೆ (Israel) ಹೋಲಿಸಿದರೆ ಇರಾನ್ (Iran) ಬಳಿಯಿರುವ ಶಸ್ತ್ರಾಸ್ತ್ರಗಳು ಅಷ್ಟೇನೂ ಆಧುನಿಕ ಹಾಗೂ ಪರಿಣಾಮಕಾರಿ ಅಲ್ಲ. ಆದರೆ ಅವುಗಳ ಮಾರಕ ದಾಳಿಯಿಂದ ಆಗುತ್ತಿರುವ ಅಪಾರ ಹಾನಿಯನ್ನು ತಪ್ಪಿಸಲು ಮಾತ್ರ ಸಾಧ್ಯವಾಗುತ್ತಿಲ್ಲ.
ಅವುಗಳನ್ನು ಧ್ವಂಸ ಮಾಡುವಲ್ಲಿ ಅಮೆರಿಕ 90% ರಷ್ಟು ಯಶಸ್ವಿಯಾದರೂ, ಆ ಕಾರ್ಯಾಚರಣೆ ಭಾರೀ ದುಬಾರಿಯಾಗುತ್ತಿದೆ. ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕದ ನೆಲೆಗಳು, ತೈಲಾಗಾರಗಳು, ರಾಯಭಾರ ಕಚೇರಿ, ಕಟ್ಟಡಗಳ ಮೇಲೆ ದಾಳಿ ಮಾಡಲು ಇರಾನ್ ಬಳಸುತ್ತಿರುವುದು ಶಾಹೇದ್-136 ಡ್ರೋನ್, ಇದರ ಬೆಲೆ ಅಂದಾಜು 2 ಲಕ್ಷ ರೂ. ಆದರೆ ಇವುಗಳನ್ನು ತಡೆಯಲು ಅಮೆರಿಕ ಬಳಸುತ್ತಿರುವ ಪ್ಯಾಕ್-3 ಪ್ರತಿಬಂಧಕದ ಬೆಲೆ ಬರೋಬ್ಬರಿ 36 ಕೋಟಿ ರೂ. ಆಗಿದೆ. ಅಲ್ಲದೇ ಥಾಡ್ ಕೂಡ ಬಲು ದುಬಾರಿಯಾಗಿದೆ. ಇದನ್ನೂ ಓದಿ: ಇರಾನ್ ಪ್ರತೀಕಾರದ ದಾಳಿ – ಅಮೆರಿಕದ ಅತಿದೊಡ್ಡ ರಾಡಾರ್ ನಾಶ; ಶತಕೋಟಿ ಡಾಲರ್ ನಷ್ಟ
ಹೀಗಿರುವಾಗ, ಇರಾನ್ ಹಾರಿಸುವ ಕ್ಷಿಪಣಿಗಳನ್ನು ತಡೆಯುವುದು ಅಮೆರಿಕದ ಪಾಲಿಗೆ ಕಷ್ಟಕರ ಹಾಗೂ ಅತಿ ದುಬಾರಿಯಾಗುತ್ತಿದೆ. ಒಂದರ ಹಿಂದೊಂದರಂತೆ ನುಗ್ಗಿಬರುವ ಎಲ್ಲಾ ಕ್ಷಿಪಣಿಗಳನ್ನು ಗುರುತಿಸಿ ಹೊಡೆಯುವುದು ಯಾವ ರಕ್ಷಣಾ ವ್ಯವಸ್ಥೆಗೂ ಸಾಧ್ಯವಿಲ್ಲವಾದ ಕಾರಣ, ಇವುಗಳಲ್ಲಿ ಕೆಲವಾದರೂ ಗುರಿಗಳನ್ನು ಧ್ವಂಸಗೊಳಿಸುವ ಸಾಧ್ಯತೆ ಇದ್ದೇ ಇರುತ್ತದೆ.
ಭೂಗರ್ಭ ಡ್ರೋನ್ ಸಂಗ್ರಹ ವಿಡಿಯೋ ರಿಲೀಸ್
ತಮ್ಮ ನಾಯಕ ಖಮೇನಿ ಹತ್ಯೆ ಬಳಿಕ ಅಮೆರಿಕ-ಇಸ್ರೇಲ್ ವಿರುದ್ಧ ಇರಾನ್ ಸೇಡಿನ ಜ್ವಾಲೆಯಿಂದ ಕುದಿಯುತ್ತಿದೆ. ಇದೇ ಹೊತ್ತಲ್ಲಿ ತನ್ನ ಭೂಗರ್ಭ ಡ್ರೋನ್ ಶಸ್ತ್ರಾಗಾರದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಶತ್ರುಗಳಿಗೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಭೂಮಿಯೊಳಗೊಂದು ರಹಸ್ಯ ʻಮಿಸೈಲ್ ಸಿಟಿʼ – ಬೆಚ್ಚಿಬಿದ್ದ ಇಸ್ರೇಲ್

