– 5,000 ಸಾವಿರ ಕಿಮೀ ವರೆಗಿನ ಟ್ರ್ಯಾಕಿಂಗ್ ಸಾಮರ್ಥ್ಯ ಹೊಂದಿದ್ದ ರಾಡಾರ್
ಟೆಹ್ರಾನ್: ಇರಾನ್ ವಿರುದ್ಧ ಅಮೆರಿಕ- ಇಸ್ರೇಲ್ (Iran vs US – Israel War) ನಡೆಸಿದ ಜಂಟಿ ವಾಯುದಾಳಿ ನಂತರ ಭುಗಿಲೆದ್ದ ಸಂಘರ್ಷದ ಕಿಚ್ಚು ಮಧ್ಯಪ್ರಾಚ್ಯದ ನಂತರ ಈಗ ಐರೋಪ್ಯ ಒಕ್ಕೂಟಕ್ಕೂ ತಾಗುವ ಭೀತಿ ಎದುರಾಗಿದೆ.
ಅಮೆರಿಕ- ಇಸ್ರೇಲ್ ಶನಿವಾರ ನಡೆಸಿದ ‘ಆಪರೇಷನ್ ಎಪಿಕ್ ಫ್ಯೂರಿ’ ಹೆಸರಿನ ಏರ್‌ಸ್ಟ್ರೈಕ್‌ನಲ್ಲಿ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಕುದಿಯುತ್ತಿರುವ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕೊಲ್ಲಿರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳು, ರಾಯಭಾರ ಕಚೇರಿಗಳನ್ನ ಗುರಿಯಾಗಿಸಿಕೊಂಡು ಮಂಗಳವಾರವೂ ದಾಳಿ ಮುಂದುವರಿಸಿದೆ. ದೋಹಾ, ಮನಾಮ, ದುಬೈನ ಹಲವು ಇರಾನ್ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದೆ.
ಶತಕೋಟಿ ಡಾಲರ್ ಶಸ್ತ್ರಾಸ್ತ್ರ ನಾಶ
ಎರಡೂ ಕಡೆಯ ದಾಳಿಯಲ್ಲಿ ಶತಕೋಟಿ ಡಾಲರ್ (Billion Dollar) ಮೌಲ್ಯದ ಮಿಲಿಟರಿ ಶಸ್ತ್ರಾಸ್ತ್ರಗಳು ನಾಶವಾಗಿವೆ. ಈ ಮಧ್ಯೆ ಗಲ್ಫ್‌ನಲ್ಲಿ ಅಮೆರಿಕದ ಅತಿದೊಡ್ಡ ರಾಡಾರ್ (US Radar) ವ್ಯವಸ್ಥೆಯನ್ನ AN/FPS-132 ನಾಶ ಪಡಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. 5,000 ಕಿಮೀ ಗಳ ಟ್ರ್ಯಾಕಿಂಗ್ ವ್ಯಾಪ್ತಿಯನ್ನು ಹೊಂದಿದ್ದ ರಾಡಾರ್ ವ್ಯವಸ್ಥೆಯನ್ನ ಹೊಡೆದುರುಳಿಸಲಾಗಿದೆ ಎಂದು IRGC ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

AN/FPS-132 ರಾಡಾರ್ ವ್ಯವಸ್ಥೆಯ ವಿಶೇಷತೆ ಏನು?
ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ಹೊಂದಿದ್ದ AN/FPS-132 ರಾಡಾರ್ ವ್ಯವಸ್ಥೆಯು ಸಕಾಲದಲ್ಲಿ ಶತ್ರುಗಳ ಸಂಭಾವ್ಯ ದಾಳಿಯನ್ನ ಪತ್ತೆ ಮಾಡುತ್ತಿತ್ತು. ಅಮೆರಿಕ 2013 ರಲ್ಲಿ ಇದನ್ನ 1.1 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಿ ಕತಾರ್‌ನಲ್ಲಿರುವ ಅಲ್ ಉದೈದ್ ವಾಯುನೆಲೆಯಲ್ಲಿ (Udeid Air Base) ಇರಿಸಿತ್ತು. ಖಂಡಾಂತರ ಕ್ಷಿಪಣಿಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ವಿಶಿಷ್ಟ ಸಾಧನ ಇದಾಗಿತ್ತು.
ಇರಾನ್ ನಿಖರ ದಾಳಿಗೆ ರಾಡಾರ್ ಉಡೀಸ್
ಸಾವಿರಾರು ಕಿಮೀ ದೂರದಲ್ಲಿ ಶತ್ರುಗಳ ದಾಳಿಯನ್ನ ಪತ್ತೆಹಚ್ಚುತ್ತಿದ್ದ ರಾಡರ್ ವ್ಯವಸ್ಥೆಯನ್ನ ಇರಾನ್ ಕರಾರುವಕ್ಕಾದ ಕ್ಷಿಪಣಿ ದಾಳಿ ಮೂಲಕ ಉಡೀಸ್ ಮಾಡಿದೆ. ಇರಾನ್ ಸೇನೆ ಈ ಬಗ್ಗೆ ಮಾಹಿತಿ ನೀಡಿದ ಬೆನ್ನಲ್ಲೇ ಕತಾರ್ ಅಧಿಕಾರಿಗಳೂ ರಾಡಾರ್ ವ್ಯವಸ್ಥೆ ಮೇಲಿನ ದಾಳಿಯನ್ನ ಒಪ್ಪಿಕೊಂಡಿದ್ದಾರೆ. ಸದ್ಯ ರಾಡಾರ್ ನಾಶದಿಂದ ಅಮೆರಿಕದ ಕಣ್ಗಾವಲು ಕಾರ್ಯಾಚರಣೆಯಲ್ಲಿ ತೀವ್ರ ವ್ಯತ್ಯಯವಾಗಿದೆ.

