ಮಂಗಳೂರು: ನಗರದಲ್ಲಿ ಚಿರತೆ (Leopard) ಕಾಟ ಶುರುವಾಗಿದೆ. ರಾತ್ರಿ ವೇಳೆ ನಗರ ಭಾಗಕ್ಕೆ ಚಿರತೆ ನುಗ್ಗುತ್ತಿದ್ದು, ನಗರವಾಸಿಗಳು ಭಯಭೀತರಾಗಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವವರು ಚಿರತೆ ಚಿಂತೆಗೆ ಬಿದ್ದಿದ್ದಾರೆ.
ಕಾಡು ಪ್ರದೇಶಗಳಲ್ಲಿ, ಕಾಡಂಚಿನ ನಾಡಲ್ಲಿ ಓಡಾಟ ನಡೆಸುತ್ತಿದ್ದ ಚಿರತೆಗಳು ಇದೀಗ ನಗರ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತಿವೆ. ಮಂಗಳೂರು ಮಹಾನಗರದಲ್ಲೂ ಚಿರತೆ ಕಾಟ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಮಂಗಳೂರು ನಗರದ ಕದ್ರಿ ಕೈಬಟ್ಟಲ್, ಶಕ್ತಿನಗರ ಹಾಗೂ ಮರೋಳಿ ಭಾಗದಲ್ಲಿ ರಾತ್ರಿ ವೇಳೆ ಚಿರತೆ ಕಾಟ ಹೆಚ್ಚಾಗಿದೆ. ಮೂರು ಚಿರತೆಗಳು ಇವೆ ಎನ್ನಲಾಗಿದ್ದು, ಕೆಲ ಮನೆಗಳ ಸಿಸಿಟಿವಿಯಲ್ಲಿ ಚಿರತೆಗಳ ಓಡಾಟ ಸೆರೆಯಾಗಿದೆ. ಇದನ್ನೂ ಓದಿ: ಭಾರತದ ಗಾಳಿ ಸೇವಿಸಿ, ಯಾವುದೋ ದೇಶದ ಅಧ್ಯಕ್ಷ ಸತ್ತರೆ ಇಲ್ಲಿ ಅಳುವುದು ಯಾಕೆ?: ಯತ್ನಾಳ್
ಕದ್ರಿಯ ಡಾಕ್ಟರ್ಸ್ ಕಾಲೊನಿ ಗೇಟ್ ಮುಂಭಾಗದಲ್ಲಿ ಚಿರತೆ ಓಡಾಟ ನಡೆಸಿರುವುದು ಅಲ್ಲಿನ ಎರಡು ಸಿಸಿಟಿವಿಗಳಲ್ಲಿ ದಾಖಲಾಗಿದೆ. ಚಿರತೆಯ ಚಲನವಲನ ಸಿ.ಸಿ ಕ್ಯಾಮೆರಾದಲ್ಲಿ ಮಾತ್ರ ಸೆರೆಯಾಗಿದೆ ಹೊರತು ಯಾರಿಗೂ ನೇರವಾಗಿ ಕಾಣಲು ಸಿಕ್ಕಿಲ್ಲ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. ಚಿರತೆ ಹಿಡಿಯುವಂತೆ ಜನ ಆಗ್ರಹಿಸಿದ್ದಾರೆ. ರಾತ್ರಿ ವೇಳೆ ಚಿರತೆಗಳ ಓಡಾಟದಿಂದ ನಗರವಾಸಿಗಳು ಭಯಗೊಂಡು ರಾತ್ರಿ ಹೊರ ಬಾರದ ಪರಿಸ್ಥಿತಿಯಾಗಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು, ರಾತ್ರಿ ವೇಳೆ ಧಾರ್ಮಿಕ ಉತ್ಸವಗಳಿಗೆ ತೆರಳುವವರು ಆತಂಕ ಪಡುತ್ತಿದ್ದಾರೆ.
ಸದ್ಯ, ಚಿರತೆಯನ್ನು ಸೆರೆಹಿಡಿಯಲು ಕದ್ರಿ ಮತ್ತು ಮರೋಳಿ ಭಾಗಗಳಲ್ಲಿ ಅರಣ್ಯ ಇಲಾಖೆ ಬೋನು ಇರಿಸಿದೆ. ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರುವಾಗ ಎಚ್ಚರಿಕೆ ವಹಿಸುವಂತೆ ಹಾಗೂ ಚಿರತೆ ಕಂಡು ಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಇದನ್ನೂ ಓದಿ: ಮಲೆ ಮಹದೇಶ್ವರನಿಗೆ ತಟ್ಟಲ್ಲ ಗ್ರಹಣದ ಎಫೆಕ್ಟ್: ಚಂದ್ರಗ್ರಹಣವಿದ್ದರೂ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ

