ಕಾರವಾರ: ಇರಾನ್-ಇಸ್ರೇಲ್ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧಾಂತಕ ಉಲ್ಬಣಗೊಂಡ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ 150ಕ್ಕೂ ಹೆಚ್ಚು ಯಾತ್ರಿಕರ ಉಮ್ರಾ ಯಾತ್ರೆ ರದ್ದಾಗಿದೆ.
ಭಾರತದಿಂದ ದುಬೈ, ಜಿದ್ದಾ ಸೇರಿ ಅರಬ್ ರಾಷ್ಟ್ರಗಳಿಗೆ ತೆರಳುವ ವಿಮಾನ ತಾತ್ಕಾಲಿಕ ರದ್ದಾದ ಕಾರಣ ಉತ್ತರ ಕನ್ನಡ ಜಿಲ್ಲೆಯ 150 ಕ್ಕೂ ಹೆಚ್ಚು ಯಾತ್ರಿಕರ ಉಮ್ರಾ ಯಾತ್ರೆ ರದ್ದಾಗಿದೆ. ಪ್ರತಿ ವರ್ಷ ರಂಜಾನ್ ಸಮಯದಲ್ಲಿ ಉಮ್ರಾ ಯಾತ್ರೆಗೆ ತೆರಳುತ್ತಿದ್ದ ಕಾರವಾರ, ಭಟ್ಕಳ, ದಾಂಡೇಲಿಯ ಮುಸ್ಲಿಂ ಸಮುದಾಯದವರು ಯಾತ್ರೆಗಾಗಿ ಕಳೆದ ಎರಡು ತಿಂಗಳ ಹಿಂದೆ ಟ್ರಾವೆಲ್ ಏಜೆನ್ಸಿ ಮೂಲಕ ವಿಮಾನದ ಟಿಕೆಟ್ ಬುಕ್ ಮಾಡಿ ಸಿದ್ಧವಾಗಿದ್ದರು.
ಭಟ್ಕಳದಲ್ಲಿ 70, ದಾಂಡೇಲಿ 20, ಕಾರವಾರ, ಹೊನ್ನಾವರ, ಮುಂಡಗೋಡು ಸೇರಿ 60 ಕ್ಕೂ ಹೆಚ್ಚು ಯಾತ್ರಿಕರ ಉಮ್ರಾ ಯಾತ್ರೆಗೆ ಟಿಕೆಟ್ ಬುಕ್ ಮಾಡಿದ್ದು, ಇದೀಗ ರದ್ದಾಗಿದೆ. ಯಾತ್ರೆ ರದ್ದಾದ ಕುರಿತು ’ಪಬ್ಲಿಕ್ ಟಿವಿ’ ಜೊತೆ ನೋವು ತೋಡಿಕೊಂಡ ಯಾತ್ರಿಕರು ರಂಜಾನ್ ತಿಂಗಳಲ್ಲಿ ಉಪವಾಸ ಇದ್ದು, ಹಣ ಕೂಡಿಟ್ಟು ವರ್ಷದಲ್ಲಿ ಒಂದು ಬಾರಿ ಯಾತ್ರೆ ಮಾಡುತ್ತಿದ್ದೆವು. ಗಲ್ಫ್ ರಾಷ್ಟ್ರದಲ್ಲಿ ಯುದ್ಧದ ಆತಂಕ ಇರುವುದರಿಂದ ನಮ್ಮ ಯಾತ್ರೆ ರದ್ದಾಗಿದೆ. ಗಲ್ಫ್ ರಾಷ್ಟ್ರದಲ್ಲಿ ಸಹ ನಮ್ಮವರು ಹೆಚ್ಚಾಗಿ ಇದ್ದಾರೆ. ಅವರೆಲ್ಲರೂ ಸಿಲುಕಿದ್ದು, ಇದೀಗ ತೊಂದರೆ ಅನುಭವಿಸುವಂತಾಗಿದೆ ಎಂದು ನೋವು ತೋಡಿಕೊಂಡರು.

