– ನಂದಿನಿ ಪೌಡರ್ ಬಳಸಿಕೊಂಡೇ ಹಾಲು ಕಲಬೆರಕೆ
ಕೋಲಾರ: ಆ ಜಿಲ್ಲೆ ಹಾಲಿನ (Milk) ಕ್ರಾಂತಿಯಲ್ಲಿ ರಾಜ್ಯದಲ್ಲೇ ಹೆಸರು ಮಾಡಿದ್ದ ಜಿಲ್ಲೆ.. ರಾಜ್ಯದಲ್ಲೇ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ಅಲ್ಲಿ ನೀರಿಗಿಂತ ಹೆಚ್ಚಾಗಿ ಹಾಲಿನ ಹೊಳೆ ಹರಿಯುತ್ತದೆ. ಇಂತಹ ಜಿಲ್ಲೆಯಲ್ಲಿ ಈಗ ಕಲಬೆರಕೆ ಹಾಲಿನ ದಂಧೆ ಜಿಲ್ಲಾಡಳಿತದ ನಿದ್ದೆಗೆಡಿಸಿದ್ದ ಜಿಲ್ಲಾಡಳಿತ ಕಲಬೆರಕೆ ಹಾಲಿನ (Adulterated Milk) ವಿರುದ್ಧ ಸಮರ ಸಾರಿದೆ.
ಕೋಲಾರ ಜಿಲ್ಲೆಗೆ ಹೊಂದಿಕೊಂಡಂತೆ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಿವೆ. ಹೀಗಾಗಿ ಅಲ್ಲಿನ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಖಾಸಗಿ ಡೈರಿಗಳು ಕೋಲಾರ (Kolara) ಜಿಲ್ಲೆಯಲ್ಲಿ ಕಲಬೆರಕೆ ಹಾಲಿನ ಅಡ್ಡೆಗಳನ್ನ ನಿರ್ಮಾಣ ಮಾಡಿಕೊಂಡು ಇಲ್ಲಿ ಕಲಬೆರಕೆ ಹಾಲು ಮಾಡುತ್ತಿದ್ರು. ಇದನ್ನೂ ಓದಿ: ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ತಾಪಮಾನ ವರದಿ – ಹವಾಮಾನ ಇಲಾಖೆ ಎಚ್ಚರಿಕೆ

ಈ ಬಗ್ಗೆ ಮಾಹಿತಿ ಪಡೆದ ಕೋಲಾರ ಡಿಸಿ ಎಂ.ಆರ್ ರವಿ ಏಕಕಾಲಕ್ಕೆ 32 ಸ್ಥಳಗಳಲ್ಲಿ ದಾಳಿ ಮಾಡಿ ಸುಮಾರು 42 ಹಾಲಿನ ಮಾದರಿಗಳನ್ನು ಸಂಗ್ರಹ ಮಾಡಿದ್ರು. ಹಾಲಿಗೆ ಯೂರಿಯಾ, ಹಾಲಿನ ಪುಡಿ, ಕೆಲವೊಂದು ಕೆಮಿಕಲ್ ಪೌಡರ್, ಪಾಮಾಯಿಲ್, ಕೊಬ್ಬಿನ ಅಂಶ, ಉಪ್ಪು ಮಿಶ್ರಣ ಮಾಡುವ ಮೂಲಕ ಹಾಲನ್ನ ತಯಾರು ಮಾಡಿ ಅದನ್ನು ಖಾಸಗಿ ಹಾಲಿನ ಡೈರಿಗಳಿಗೆ ಮಾರಾಟ ಮಾಡುವ ದಂಧೆಯೇ ನಡೀತಿತ್ತು. ಅದರಲ್ಲೂ ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್ ಬಂಗಾರಪೇಟೆ ತಾಲೂಕುಗಳಲ್ಲಿ ಈ ದಂಧೆ ಹೆಚ್ಚಾಗಿದೆ. ಖಚಿತ ಮಾಹಿತಿ ಮೇರೆಗೆ ಜಿಲ್ಲಾಡಳಿತ ಸುಮಾರು 5-6 ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಗಳ ನೆರವಿನೊಂದಿಗೆ ದಾಳಿ ಮಾಡಿ ಹಾಲಿನ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಿದೆ. ವರದಿ ಬಂದ ಕೂಡಲೇ ಕ್ರಿಮಿನಲ್ ಕೇಸ್ ದಾಖಲಿಸಿ ಖಾಸಗಿ ಡೈರಿಗಳು ಹಾಗೂ ಖಾಸಗಿ ಹಾಲು ಸಂಗ್ರಹ ಘಟಕಗಳನ್ನೇ ನಿಷೇಧ ಮಾಡುವ ನಿರ್ಧಾರಕ್ಕೆ ಬಂದಿದೆ.

ನಂದಿನಿ ಪೌಡರ್ ಬಳಸಿಕೊಂಡೇ ಕಲಬೆರಕೆ ಹಾಲು
ಇನ್ನೂ ಕೆಜಿಎಫ್ ತಾಲೂಕಿನ ಬಳಗೆರೆ ಎಂಬಲ್ಲಿ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ನೇತೃತ್ವದಲ್ಲಿ ದಾಳಿ ನಡೆಸಿದ್ರು. ಮನೆಯಲ್ಲಿ ಅಕ್ರಮವಾಗಿ ಕಲಬೆರಕೆ ಹಾಲು ಮಾಡುತ್ತಿದ್ದ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ಮಾಡಿದ್ರು. ಕಲಬೆರಕೆ ಮಾಡಲು ಬಳಕೆ ಮಾಡುತ್ತಿದ್ದ ನಂದಿನ ಹಾಲಿನ ಪುಡಿ ಪಾಕೆಟ್, ಮಿಲೆಟ್ಸ್ ಮಿಲ್ಕ್ ಲಡ್ಡು, 7 ಬೆಲ್ಲದ ಪಾಕೆಟ್, ಪಾಮ್ ಆಯಿಲ್, ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡ್ರು.
ದಂಧೆಯಲ್ಲಿ ತೊಡಗಿದ್ದ ಆಂಧ್ರ ಮೂಲದ 8 ಜನರನ್ನು ಬಂಧಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಕಲಬೆರಕೆ ಹಾಲಿನ ವಿರುದ್ಧ ಅಧಿಕಾರಿಗಳು ಸಮರ ಸಾರಿದ್ದು, ಎರಡು ಬಾರಿ ದೊಡ್ಡ ಮಟ್ಟದಲ್ಲಿ ಕಲಬೆರಕೆ ಹಾಲಿನ ವಿರುದ್ಧ ದಾಳಿ ಮಾಡಿ ಈಗಾಗಲೇ ಅವುಗಳಿಗೆ ಕಡಿವಾಣ ಹಾಕಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನೂ ಓದಿ: 140 ಕೋಟಿ ಬಾಕಿ – ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಬಂದ್

