– ಸಂತ್ರಸ್ತೆ ಸೇರಿ ಪೋಷಕರ ವಿಚಾರಣೆ ನಡೆಸಲು ಚಿಂತನೆ
– ಮುತ್ಯಾ ಭಕ್ತರಿಂದ ಇಂದು ಸಭೆ
ಕಲಬುರಗಿ/ಯಾದಗಿರಿ: ಅಪ್ರಾಪ್ತ ಬಾಲಕಿ ಜೊತೆ ಅನುಚಿತ ವರ್ತನೆ ಮಾಡಿರುವ ಆರೋಪದ ಮೇಲೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಇಂದು (ಫೆ.27) ಮುತ್ಯಾ ಸೇರಿ ಸಂತ್ರಸ್ತೆ ಹಾಗೂ ಪೋಷಕರ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪವಾಡ ಪುರುಷ ಅಂತಾ ಫೇಮಸ್ ಆಗಿರೋ ಮಲ್ಲಿಕಾರ್ಜುನ್ ಮುತ್ಯಾಗೆ ಸಂಕಷ್ಟ ಎದುರಾಗಿದೆ. ಯಾದಗಿರಿಯ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಮಠಕ್ಕೆ ಬಂದ ಭಕ್ತರ ಮಗುವಿನ ಜೊತೆ ಅನುಚಿತವಾಗಿ ವರ್ತಿಸಿದ್ರು ಅನ್ನೋ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಡಿಯೋ ಕಂಟಕವನ್ನು ತಂದೊಡ್ಡಿದೆ. ಇದನ್ನೂ ಓದಿ: ಆ ಬಾಲಕಿ ನನ್ನ ಮಗಳಿದ್ದಂತೆ, ತಂದೆ ಮಗಳನ್ನ ಪ್ರೀತಿ ಮಾಡೋದೇ ತಪ್ಪಾ? – ಮಲ್ಲಿಕಾರ್ಜುನ ಮುತ್ಯಾ ಫಸ್ಟ್ ರಿಯಾಕ್ಷನ್
ಹೌದು, ಬಾಲಕಿಯ ಜೊತೆ ಮಲ್ಲಿಕಾರ್ಜುನ ಮುತ್ಯಾ ಅಸಭ್ಯವಾಗಿ ನಡೆದುಕೊಂಡಿದ್ರು. ಹೀಗಾಗಿ ಮುತ್ಯಾನ ವಿರುದ್ಧ ಕ್ರಮ ಜರುಗಿಸಲು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡಿತ್ತು. ಯಾದಗಿರಿ ಎಸ್ಪಿ ಅವರಿಗೆ ಪತ್ರವನ್ನೂ ಬರೆದಿದ್ದರು. ಈಗ ಗೋಗಿ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಇಡೀ ಪ್ರಕರಣದ ಮಾಹಿತಿ ಪಡೆದುಕೊಂಡು ವಿಡಿಯೋ ಹೇಳಿಕೆ ರಿಲೀಸ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದು, ಭಕ್ತರು ಈ ಪ್ರಕರಣದಿಂದ ಹೆದರುವ ಅವಶ್ಯಕತೆಯಿಲ್ಲ. ಪೊಲೀಸರು ಕರೆದಾಗ ತನಿಖೆಗೆ ಹೋಗುವುದಾಗಿ ಹೇಳಿದ್ದಾರೆ.
ಸದ್ಯ ಅಜ್ಞಾತ ಸ್ಥಳದಲ್ಲಿರುವ ಮಲ್ಲಿಕಾರ್ಜುನ ಕಾನೂನು ತಜ್ಞರ ಸಂಪರ್ಕ ಮಾಡಿ, ಪ್ರಕರಣ ಕುರಿತು ಮುಂದಿನ ಆಗು ಹೋಗುಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಶುಕ್ರವಾರ (ಫೆ.27) ಬೆಳಗ್ಗೆ 10 ಗಂಟೆ ನಂತರ ಗೋಗಿ ಪೊಲೀಸ್ ಠಾಣೆ ಅಥವಾ ಎಸ್.ಪಿ ಕಚೇರಿಗೆ ಖುದ್ದು ಹಾಜರಾಗಿ ತನಿಖೆಗೆ ಸಹಕಾರ ನೀಡಲು ಪ್ಲ್ಯಾನ್ ಮಾಡಿದ್ದಾರೆ. ಇನ್ನೂ ಸಂತ್ರಸ್ತೆ ಹಾಗೂ ಅವರ ಪೋಷಕರ ವಿಚಾರಣೆ ಮಾಡುವ ಸಾಧ್ಯತೆಯಿದ್ದು, ಅನುಚಿತ ವರ್ತನೆ ಉದ್ದೇಶಪೂರ್ವಕವಾಗಿ ಆಗಿದೆಯಾ ಅಥವಾ ಇಲ್ಲವಾ ಎಂದು ಹಲವು ಆಯಾಮದಲ್ಲಿ ಮಹತ್ವದ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಇಡೀ ಪ್ರಕರಣದಲ್ಲಿ ಪೋಷಕರು ನೀಡಿದ ಹೇಳಿಕೆ ಬಿಗ್ ಟ್ವಿಸ್ಟ್ ಕೊಟ್ಟಿದೆ. ಬಾಲಕಿಯ ಪೋಷಕರು ಸಾಮಾಜಿಕ ಜಾಲಾತಣದಲ್ಲಿ ವಿಡಿಯೋ ಬಿಟ್ಟಿದ್ದಾರೆ. ನನ್ನ ಮಗಳ ಜೊತೆ ಮುತ್ಯಾ ಅಸಭ್ಯವಾಗಿ ವರ್ತನೆ ಮಾಡಿಲ್ಲ ಎಂದಿದ್ದಾರೆ. ಈ ಮಧ್ಯ ಕಲಬುರಗಿಯಲ್ಲಿ ಕಾಂಗ್ರೆಸ್ ಎಂಎಲ್‌ಸಿ ತಿಪ್ಪಣಪ್ಪ ಕಮಕನೂರ್ ಮಾತನಾಡಿದ್ದು, ಮಲ್ಲಿಕಾರ್ಜುನ ಮುತ್ಯಾ ನಮ್ಮ ಕೋಳಿ ಸಮುದಾಯದ ಪ್ರಭಾವಿ ವ್ಯಕ್ತಿಯಾಗಿದ್ದು, ಅವರ ವಿರುದ್ಧ ಕೆಲವರು ಬಾಲಕಿಯ ವಿಡಿಯೋ ಇಟ್ಟುಕೊಂಡು ಷಡ್ಯಂತ್ರ ನಡೆಸಿದ್ದಾಗಿ ದೂಷಿಸಿದ್ದಾರೆ.
ಇನ್ನೂ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ಕೇಸ್ ದಾಖಲಾದ ಹಿನ್ನೆಲೆ ಅವರ ಭಕ್ತರಿಂದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾದ ಯಮನೂರಪ್ಪ ಮುತ್ಯಾ ಮಠದ ಆವರಣದಲ್ಲಿ ಸಭೆ ಹಮ್ಮಿಕೊಂಡಿದ್ದಾರೆ. ಬೆಳಿಗ್ಗೆ 11 ಗಂಟೆ ನಂತರ ಸಭೆ ನಡೆಯಲಿದ್ದು, ಕೇಸ್ ರದ್ದು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಬಾಲಕಿ ವೀಡಿಯೋ ಹಾಕಿದವರ ಮೇಲೆ ಕ್ರಮಕ್ಕೆ ಆಗ್ರಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಯಾದಗಿರಿಯಲ್ಲಿ ಭಕ್ತರಿಂದ ಬೃಹತ್ ಪ್ರತಿಭಟನೆ ಪ್ಲ್ಯಾನ್ ಕೂಡ ಮಾಡಲಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಬಾಲಕಿ ಜೊತೆ ಅನುಚಿತ ವರ್ತನೆ – ಮುತ್ಯಾ ವಿರುದ್ಧ ಪೋಕ್ಸೋ ಕೇಸ್; ಯಾವುದೇ ಕ್ಷಣದಲ್ಲಿ ಅರೆಸ್ಟ್?

