ನವದೆಹಲಿ: ನ್ಯಾಯಾಂಗದಲ್ಲಿ ಭ್ರಷ್ಟಾಚಾರದ (Corruption) ಬಗ್ಗೆ ಉಲ್ಲೇಖಿಸಿರುವ ರಾಷ್ಟ್ರೀಯ ಶಿಕ್ಷಣ ಸಂಶೋಧನ ಮತ್ತು ತರಬೇತಿ ಮಂಡಳಿಯ (NCERT) 8ನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದ ಮೇಲೆ ಸುಪ್ರೀಂ ಕೋರ್ಟ್ (Suprme Court) ಸಂಪೂರ್ಣ ನಿಷೇಧ ಹೇರಿದೆ.
ಈ ಪುಸ್ತಕದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಭಾಗವನ್ನು ಸೇರಿಸಿರುವುದನ್ನು ಕೋರ್ಟ್ ಆಳವಾದ ಒಳಸಂಚು ಎಂದು ತೀವ್ರವಾಗಿ ಖಂಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡು, ಪುಸ್ತಕದ ಭೌತಿಕ ಹಾಗೂ ಡಿಜಿಟಲ್ ನಕಲುಗಳನ್ನು ತಕ್ಷಣ ಸ್ವಾಧೀನಪಡಿಸಿಕೊಳ್ಳುವಂತೆ ಆದೇಶಿಸಿದೆ.
ಪುಸ್ತಕದ ಮುದ್ರಣ, ಮರುಮುದ್ರಣ, ಡಿಜಿಟಲ್ ಹಂಚಿಕೆ ಅಥವಾ ಯಾವುದೇ ರೂಪದಲ್ಲಿ ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಉಲ್ಲಂಘಿಸಿದರೆ ನ್ಯಾಯಾಲಯದ ಆದೇಶ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪುಸ್ತಕದಲ್ಲಿ ‘ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಎಂಬ ಅಧ್ಯಾಯದ ಭಾಗದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ, ಪ್ರಕರಣಗಳ ದಂಡೆ, ನ್ಯಾಯಾಧೀಶರ ಕೊರತೆಯಂತಹ ಸವಾಲುಗಳನ್ನು ಉಲ್ಲೇಖಿಸಲಾಗಿತ್ತು. ಜನರು ನ್ಯಾಯಾಂಗದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವನ್ನು ಅನುಭವಿಸುತ್ತಾರೆ. ಬಡವರು ಮತ್ತು ಹಿಂದುಳಿದವರಿಗೆ ಇದು ನ್ಯಾಯಕ್ಕೆ ಪ್ರವೇಶದ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ ಎಂಬಂತಹ ವಾಕ್ಯಗಳನ್ನು ಒಳಗೊಂಡಿತ್ತು. ಈ ವಿಷಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ನ್ಯಾಯಾಂಗದ ಮಾನಹಾನಿ ಮಾಡುವ ಉದ್ದೇಶವನ್ನು ಹೊಂದಿರುವ ಒಳಸಂಚು ಎಂದು ಮುಖ್ಯ ನ್ಯಾಯಮೂರ್ತಿಗಳು ಕಟು ಪದಗಳಿಂದ ಟೀಕಿಸಿದರು. ಇದನ್ನೂ ಓದಿ: NCERT ಪಠ್ಯ ವಿವಾದ| ಸುಪ್ರೀಂ ಮುಂದೆ ಬೇಷರತ್ ಕ್ಷಮೆಯಾಚಿಸಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಬೇಷರತ್ ಕ್ಷಮೆ ಕೇಳಿದರು. ಈ ಅಧ್ಯಾಯ ರಚನೆಯಲ್ಲಿ ಭಾಗಿಯಾಗಿದ್ದವರನ್ನು ಯುಜಿಸಿ ಅಥವಾ ಯಾವುದೇ ಸಚಿವಾಲಯದೊಂದಿಗೆ ಮುಂದೆ ಕೆಲಸ ಮಾಡಲು ಅವಕಾಶ ನೀಡದಂತೆ ಮಾಡಲಾಗುವುದು ಎಂದು ತಿಳಿಸಿದರು. ಈಗಾಗಲೇ 32 ಪ್ರತಿಗಳು ಮಾರಾಟವಾಗಿದ್ದು, ಪುಸ್ತಕವನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.
ಕೋರ್ಟ್ ಈ ಕ್ಷಮಾಪಣೆಯನ್ನು ಸ್ವೀಕರಿಸಲಿಲ್ಲ. ಇದರಲ್ಲಿ ಒಂದೇ ಒಂದು ಕ್ಷಮಾಪಣೆಯ ಮಾತೂ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು. ಅಧಿಕಾರಿಗಳ ತಲೆದಂಡವಾಗಬೇಕು ಎಂದ ಅವರು ಜವಾಬ್ದಾರಿಯವರನ್ನು ಗುರುತಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.
ಪ್ರಕರಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹಾಗೂ ಎನ್‌ಸಿಇಆರ್‌ಟಿ ನಿರ್ದೇಶಕ ಡಾ. ದಿನೇಶ್ ಪ್ರಸಾದ್ ಸಕ್ಲಾನಿ ಅವರಿಗೆ ನೋಟಿಸ್ ಜಾರಿ ಮಾಡಲಾಯಿತು. ಭ್ರಷ್ಟಾಚಾರದ ಉಲ್ಲೇಖಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ನ್ಯಾಯಾಲಯ ಅವಮಾನ ಅಥವಾ ಇತರ ಕಾನೂನು ಕ್ರಮ ಏಕೆ ತೆಗೆದುಕೊಳ್ಳಬಾರದು ಎಂದು ವಿವರಣೆ ಕೇಳಲಾಗಿದೆ.

