ಬಳ್ಳಾರಿ: ದೂರದ ಸೈಬೀರಿಯಾ ಮತ್ತು ಮಂಗೋಲಿಯಾದಿಂದ ಅತ್ಯಧಿಕ ಸಂಖ್ಯೆಯ ಕ್ರೌಂಚ ಪಕ್ಷಿಗಳು ಮಾಲವಿ ಜಲಾಶಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. 2020ರ ವೇಳೆಗೆ ಕೇವಲ 8 ಹಕ್ಕಿಗಳು ಮಾತ್ರ ಕಂಡು ಬಂದಿದ್ದವು. ಇದೀಗ ಕೇವಲ 6 ವರ್ಷಗಳ ಅಂತರದಲ್ಲಿ 1,500ಕ್ಕೂ ಹೆಚ್ಚಿನ ಪಕ್ಷಿಗಳು ಜಲಾಶಯಕ್ಕೆ ಬಂದಿವೆ.
ಇದು ದಕ್ಷಿಣ ಭಾರತದಲ್ಲಿಯೇ ಅತ್ಯಧಿಕ ಸಂಖ್ಯೆಯ ಕ್ರೌಂಚ ಪಕ್ಷಿಗಳು ಕಂಡುಬಂದಿದ್ದು, ದಾಖಲೆಯಾಗಿದೆ. ಸೂರ್ಯಕಾಂತಿ, ಜವೆಗೋಧಿ ಸೇರಿ ನಾನಾ ಬೆಳೆಗಳ ಕಟಾವಿನ ಬಳಿಕ ಹೊಲಗಳಲ್ಲಿ ಸಿಗುವ ಆಹಾರ ಸೇವಿಸಿದ ಕ್ರೌಂಚಗಳು ನೀರಿಗಾಗಿ ಮಾಲವಿ ಜಲಾಶಯದ ಗುಂಡಿಗಳಿಗೆ ಧಾವಿಸುತ್ತವೆ. ಇದನ್ನೂ ಓದಿ: ಕೋತಿ ರಕ್ಷಿಸಲು ಸಡನ್ ಬ್ರೇಕ್ – ಆಟೋ ಚಾಲಕ ಸಾವು
ನೀರು ಉಳಿದಿರುವ ಬೆರಳೆಣಿಕೆಯ ಗುಂಡಿಗಳಲ್ಲಿ ದನ ಕರುಗಳು ಬರುತ್ತಿರುವ ಹಿನ್ನೆಲೆ, ಜನರ ಆಗಮನವೂ ಹೆಚ್ಚಾಗಿದೆ. ಸಹಜವಾಗಿಯೇ ಇದು ಹಕ್ಕಿಗಳ ಪಾಲಿಗೆ ಆತಂಕ ತಂದೊಡ್ಡಿದೆ. ಮೀನುಗಾರಿಕೆಗಾಗಿ ಕೆಲವರು ಹಕ್ಕಿಗಳತ್ತ ಕಲ್ಲು ಬೀಸಿದ ಕಾರಣ, ಹಕ್ಕಿಗಳು ಗಾಯಗೊಂಡದ್ದೂ ಇದೆ. ವಿದೇಶದ ಅತಿಥಿ ಹಕ್ಕಿಗಳಿಗೆ ಕನಿಷ್ಠ ಕೆಲವು ದಿನಗಳವರೆಗೆ ಸುರಕ್ಷತೆ ಕಲ್ಪಿಸಬೇಕಿದೆ. ಅಲ್ಲದೇ ಇದೊಂದು ಸುರಕ್ಷಿತ ಪ್ರದೇಶವೆಂದು ಖಚಿತಗೊಂಡಾಗ ಮಾತ್ರವೇ ಮುಂದಿನ ಸಾಲಿನಲ್ಲಿಯೂ ಈ ಹಕ್ಕಿಗಳನ್ನು ಕಾಣಲು ಸಾಧ್ಯ. ಈ ಹಿನ್ನೆಲೆ ಕೆಲ ಕಾಲ ಮೀನುಗಾರಿಕೆ ನಿಲ್ಲಿಸಿ, ವಾಚರ್‌ಗಳನ್ನು ನೇಮಿಸಬೇಕು. ಇನ್ನೂ 12 ದಿನಗಳವರೆಗೆ ಮಾತ್ರ ತಂಗುವ ಈ ಕ್ರೌಂಚ ಪಕ್ಷಿಗಳನ್ನು ಅತ್ಯಂತ ಸಂತೋಷವಾಗಿರಿಸಿಕೊಂಡು, ಸುರಕ್ಷಿತವಾಗಿ ಬೀಳ್ಕೊಡುಗೆಯ ಹೊಣೆಗಾರಿಕೆ ಅರಣ್ಯ ಇಲಾಖೆ ಮತ್ತು ಸಮುದಾಯದ್ದಾಗಿದೆ. ಸ್ವಲ್ಪ ಸಹನೆ ತೋರಿಸಿದರೆ ಅವು ಸಂತೋಷದಿಂದ ತಂಗಿ, ನಂತರ ತಮ್ಮ ಪಯಣ ಆರಂಭಿಸುತ್ತವೆ.
ಕ್ರೌಂಚ ಹಕ್ಕಿಗೆ ಪೌರಾಣಿಕವಾಗಿ ವಿಶಿಷ್ಟ ಸ್ಥಾನವಿದೆ. ಪ್ರೀತಿ, ದಾಂಪತ್ಯ, ನಿಷ್ಠೆ ಮತ್ತು ವಿಯೋಗದ ಸಂಕೇತವಾಗಿ ಇದನ್ನು ಉಲ್ಲೇಖಿಸಲಾಗುತ್ತದೆ. ವಾಲ್ಮೀಕಿ ಮುನಿಗಳು ಕ್ರೌಂಚ್ ಜೋಡಿಯೊಂದರಲ್ಲಿ ಗಂಡು ಹಕ್ಕಿಯನ್ನು ಬೇಟೆಗಾರನು ಹೊಡೆದು ಕೊಂದಾಗ, ಹೆಣ್ಣು ಹಕ್ಕಿಯ ವಿಲಾಪ ನೋಡಿ ದುಃಖಭರಿತರಾಗಿದ್ದರು. ಆ ವ್ಯಥೆಯಿಂದಲೇ ಅವರ ಬಾಯಿಂದ ಹೊರಬಂದ ಶಾಪವೇ ಮೊದಲ ಶ್ಲೋಕವಾಗಿ ರೂಪುಗೊಂಡಿತು ಎಂದು ಹೇಳಲಾಗುತ್ತದೆ. ಇದೇ ಘಟನೆಯಿಂದ ರಾಮಾಯಣ, ಮಹಾಕಾವ್ಯದ ಮುನ್ನುಡಿಯಾಯಿತು ಎಂಬ ನಂಬಿಕೆ ಇದೆ. ಇದನ್ನೂ ಓದಿ: ಕೊಡಗಿನಲ್ಲಿ ಗುಡ್ಡ ಕುಸಿತ ಸ್ಥಳಗಳಿಗೆ ಶಾಶ್ವತ ತಡೆಗೋಡೆ – ಕಾಮಗಾರಿ ಶುರು

