ಭೋಪಾಲ್: ಮಧ್ಯಪ್ರದೇಶದ ಧಾರ್‌ನಲ್ಲಿರುವ ಭೋಜ್‌ಶಾಲಾ (Bhojshala) ಸಂಕೀರ್ಣದಲ್ಲಿರುವ ಕಮಲ್ ಮೌಲಾ ಮಸೀದಿಯನ್ನು ಪ್ರಾಚೀನ ದೇವಾಲಯದ ಅವಶೇಷಗಳಿಂದ ನಿರ್ಮಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆ (Department of Archaeology) ನ್ಯಾಯಾಲಯಕ್ಕೆ ವರದಿ ನೀಡಿದೆ.
ಧಾರ್ ಜಿಲ್ಲೆಯ ಭೋಜಶಾಲಾ ಸಂಕೀರ್ಣದಲ್ಲಿರುವ ಈ ಕಮಾಲ್ ಮೌಲಾ ಮಸೀದಿಯನ್ನು ಹಿಂದೂ ಸಮುದಾಯ ವಾಗ್ದೇವಿ (ದೇವಿ ಸರಸ್ವತಿ) ದೇವಾಲಯವೆಂದು ಪರಿಗಣಿಸುತ್ತದೆ. ಆದರೆ ಮುಸ್ಲಿಂ ಪಕ್ಷದವರು ಇದನ್ನು 11ನೇ ಶತಮಾನದ ಕಮಾಲ್ ಮೌಲಾ ಮಸೀದಿಯೆಂದು ಹೇಳಿಕೊಳ್ಳುತ್ತಾರೆ. ಈ ಸ್ಥಳವು ಎಎಸ್‌ಐಯಿಂದ ಸಂರಕ್ಷಿತ ಸ್ಮಾರಕವಾಗಿದೆ. ವೈಜ್ಞಾನಿಕ ತನಿಖೆಗಳು, ಸಮೀಕ್ಷೆಗಳು ಮತ್ತು ಉತ್ಪನನಗಳು, ವಾಸ್ತುಶಿಲ್ಪದ ಅವಶೇಷಗಳು, ಶಾಸನಗಳು, ಕಲೆ ಮತ್ತು ಶಿಲ್ಪಗಳ ಅಧ್ಯಯನ ಮತ್ತು ವಿಶ್ಲೇಷಣೆಯ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಪುರಾತತ್ವ ಇಲಾಖೆ ಹೇಳಿದೆ. ಇದನ್ನೂ ಓದಿ: ಫೆ.26ಕ್ಕೆ ಭಾರತಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ
ಎಎಸ್‌ಐ ವರದಿಯ ಪ್ರಕಾರ, ಇಲ್ಲಿ ಪರಮಾರ ವಂಶದ ಕಾಲದ ಸುಮಾರು 12ನೇ ಶತಮಾನ ಮಂದಿರದ ಅವಶೇಷಗಳು ಕಂಡುಬಂದಿವೆ. ಮಸೀದಿಯ ನಿರ್ಮಾಣದಲ್ಲಿ ಹಿಂದಿನ ಮಂದಿರಗಳ ಭಾಗಗಳನ್ನು ಮರುಬಳಕೆ ಮಾಡಲಾಗಿದೆ. ವರದಿಯಲ್ಲಿ 94 ಮೂರ್ತಿಗಳು ಮತ್ತು ಮೂರ್ತಿ ತುಂಡುಗಳು ಪತ್ತೆಯಾಗಿವೆ ಎಂದು ತಿಳಿಸಲಾಗಿದ್ದು, ಅವುಗಳಲ್ಲಿ ಗಣೇಶ, ಬ್ರಹ್ಮ, ನರಸಿಂಹ, ಭೈರವ ಮುಂತಾದ ದೇವತೆಗಳ ಚಿತ್ರಗಳು, ಪ್ರಾಣಿಗಳು ಹಾಗೂ ಪೌರಾಣಿಕ ಆಕೃತಿಗಳು ಸೇರಿವೆ. ಅನೇಕ ಮೂರ್ತಿಗಳನ್ನು ಕೆತ್ತಿ ನಾಶಗೊಳಿಸಲಾಗಿದೆ ಅಥವಾ ಬದಲಾಯಿಸಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಭೋಜಶಾಲಾ ಸಂಕೀರ್ಣದ ನಿರ್ಮಾಣ 12ನೇ ಶತಮಾನದ್ದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಕಮಾಲ್ ಮೌಲಾ 1265 ವರ್ಷದ ಸುಮಾರಿಗೆ ಮರುನಿರ್ಮಿಸಿದೆ ಎಂದು ಸೂಚಿಸಲಾಗಿದೆ. ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠಕ್ಕೆ ಎಎಸ್‌ಐ ಈ ವರದಿಯನ್ನು ಸಲ್ಲಿಸಿದ್ದು, ಇದು 10 ಸಂಪುಟಗಳಲ್ಲಿ 2,000ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿದೆ. ವಿಚಾರಣೆಯಲ್ಲಿ ಕೋರ್ಟ್ ಎರಡು ವಾರಗಳೊಳಗೆ ಎಲ್ಲಾ ಪಕ್ಷಗಳಿಂದ ವರದಿಗೆ ಸಂಬಂಧಿಸಿದ ಆಕ್ಷೇಪಗಳು, ಅಭಿಪ್ರಾಯಗಳು, ಸಲಹೆಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ. ಮುಂದಿನ ವಿಚಾರಣೆ ಮಾ.16ಕ್ಕೆ ನಿಗದಿಯಾಗಿದೆ.ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ – ಯುವ ಕಾಂಗ್ರೆಸ್ ಮುಖ್ಯಸ್ಥ ಬಂಧನ

