ದೇಹದ ಸೂಕ್ಷ್ಮ ಭಾಗಗಳಲ್ಲಿ ಕಣ್ಣು (Eye) ಪ್ರಮುಖವಾದದ್ದು, ಕಣ್ಣು ನಿರಂತರವಾಗಿ ಬೆಳಕು, ಆಮ್ಲಜನಕ ಹಾಗೂ ಪರಿಸರ ಒತ್ತಡಗಳಿಗೆ ಒಳಗಾಗುತ್ತದೆ. ಇದು ʻಆಕ್ಸಿಡೇಟಿವ್ʼ ಹಾನಿ ಹಾಗೂ ಉರಿಯೂತಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಕಣ್ಣಿನ ʻಮ್ಯಾಕ್ಯುಲರ್ʼ ಅವನತಿ ಹಾಗೂ ಶುಷ್ಕನೇತ್ರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ನಮ್ಮ ದೈನಂದಿನ ಆಹಾರಗಳ ಆಯ್ಕೆ, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ರೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರಕರಣದಲ್ಲಿ ನಡೆದಿದ್ದೇ ಬೇರೆ…

ಹೌದು. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನ ಜೈಲಿನಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದಾಗಿನಿಂದಲೂ ಹೊಸ ಹೊಸ ವಿವಾದಗಳು ಸೃಷ್ಟಿಯಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ಇಮ್ರಾನ್ ಖಾನ್ ಅವರು ಜೈಲಿನಲ್ಲಿ ತಮ್ಮ ಕಣ್ಣುಗಳನ್ನ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಹರಡಿದ್ದು, ಭಾರೀ ಸಂಚಲನ ಮೂಡಿಸಿತ್ತು. ಈ ಬೆನ್ನಲ್ಲೇ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಹೇಳಿದ್ದರು.

ಆದ್ರೂ ಇಮ್ರಾನ್ ಖಾನ್ ಕಣ್ಣು ಕಳೆದುಕೊಂಡ ಬಗ್ಗೆ ಸಾಕಷ್ಟು ಅನುಮಾನ ಮೂಡಿದ್ದವು, ಜೈಲಿನಲ್ಲಿ ಸೌಲಭ್ಯ ಒದಗಿಸದ ಬಗ್ಗೆ ಕಳವಳ ಸೃಷ್ಟಿಯಾಗಿದ್ದವು. ಅಡಿಯಾಲ ಜೈಲಿನಲ್ಲಿ ಸುಮಾರು 3 ವರ್ಷಗಳ ಕಾಲ ವೈದ್ಯಕೀಯ ಚಿಕಿತ್ಸೆ ವಿಳಂಬವಾದ ಕಾರಣ, ಇಮ್ರಾನ್ ಖಾನ್ ಅವರ ಬಲಗಣ್ಣಿನ ಸುಮಾರು 85% ದೃಷ್ಟಿ ಕಳೆದುಕೊಂಡಿದ್ದಾರೆ. ಇನ್ನು, ಇಮ್ರಾನ್ ಖಾನ್ ಅವರು 2025 ಅಕ್ಟೋಬರ್ ನಿಂದಲೂ ನಿರಂತರವಾಗಿ ದೃಷ್ಟಿ ಮಸುಕಾಗುವುದನ್ನು ಅನುಭವಿಸಿದ್ದು, ಈ ವಿಚಾರವನ್ನು ಜೈಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಅವರು ಚಿಕಿತ್ಸೆ ಒದಗಿಸದೇ, ದೃಷ್ಟಿ ಕ್ಷೀಣವಾಗಿದೆ. ಇದರಿಂದ ಇಮ್ರಾನ್ ಖಾನ್ ಅವರ ಕಣ್ಣು ಹೆಪ್ಪುಗಟ್ಟಿರುವುದು ಕಂಡಿದ್ದು, ಕೇವಲ 15% ದೃಷ್ಟಿ ಉಳಿದಿದೆ.
ಈ ಕಣ್ಣಿನ ಸಮಸ್ಯೆ ಇಮ್ರಾನ್ ಖಾನ್ ಅವರಿಗೆ ಮಾತ್ರವಲ್ಲ, 50 ವರ್ಷಕ್ಕಿಂತ ಮೇಲ್ಪಟ್ಟ ಯಾರಲ್ಲಾದರೂ ಕಂಡುಬರುವ ಸಾಧ್ಯತೆ ಇರುತ್ತದೆ. ಅದಕ್ಕೆ ಕಾರಣ ಏನು? ಸೆಂಟ್ರಲ್ ರೆಟಿನಲ್ ವೆಯಿನ್ ಅಕ್ಲೂಷನ್ ಯಾರಲ್ಲಿ ಉಂಟಾಗುತ್ತೆ? ಇದರಿಂದ ಆಗುವ ಅಪಾಯಗಳೇನು? ಅನ್ನೋದ್ರ ಬಗ್ಗೆ ಮುಂದೆ ತಿಳಿಯೋಣ…

ಇಮ್ರಾನ್ ಖಾನ್ 85% ಕಣ್ಣು ಕಳೆದುಕೊಂಡಿದ್ದೇಕೆ?
ಅಡಿಯಾಲ ಜೈಲಿನಲ್ಲಿದ್ದ ಇಮ್ರಾನ್ ಖಾನ್‌ಗೆ ಮೂರು ವರ್ಷಗಳಿಂದ ಚಿಕಿತ್ಸೆ ವಿಳಂಬವಾದ ಕಾರಣ 85% ಕಣ್ಣು ನಷ್ಟವಾಗಿದೆ. ತಪಾಸಣೆ ವೇಳೆ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದು ಗೊತ್ತಾಗಿದೆ. ವೈದ್ಯರು ಇದನ್ನ ಸೆಂಟ್ರಲ್ ರೆಟಿನಲ್ ವೆಯಿನ್ ಅಕ್ಲೂಷನ್ (Central Retinal Vein Occlusion- CRVO) ಎಂದು ಕರೆಯುತ್ತಾರೆ. ರಕ್ತ ಹೆಪ್ಪುಗಟ್ಟುವ ಜೊತೆಗೆ ಕಣ್ಣಲ್ಲಿ ನೀರು ಬರುವುದು ಮತ್ತು ದೈಹಿಕ ಅಸ್ವಸ್ಥತೆ ಉಂಟಾಗಿರುತ್ತದೆ. ಆದಾಗ್ಯು ಚಿಕಿತ್ಸೆ ನಿರಾಕರಿಸಿದ್ದರಿಂದ ಕಣ್ಣು ಕಳೆದುಕೊಂಡಂತಾಗಿದೆ.
ಸೆಂಟ್ರಲ್ ರೆಟಿನಲ್ ವೆಯಿನ್ ಅಕ್ಲೂಷನ್ ಅಂದ್ರೆ ಏನು?
ಸೆಂಟ್ರಲ್ ರೆಟಿನಲ್ ವೆಯಿನ್ ಅಕ್ಲೂಷನ್ (CRVO) ಎನ್ನುವುದು ಕಣ್ಣಿನ ಹಿಂಭಾಗದ ಮುಖ್ಯ ರಕ್ತನಾಳದಲ್ಲಿ (ರೆಟಿನಲ್ ಸಿರೆ) ಉಂಟಾಗುವ ತಡೆತವಾಗಿದೆ. ರೆಟಿನಾದಿಂದ ರಕ್ತವನ್ನ ಸಾಗಿಸುವ ಮುಖ್ಯ ರಕ್ತನಾಳವು ನಿರ್ಬಂಧಿಸಲ್ಪಟ್ಟಾಗ CRVO ಸಂಭವಿಸುತ್ತದೆ. ಇದು ರಕ್ತಸ್ರಾವ ಮತ್ತು ದೃಷ್ಟಿ ಮಂದವಾಗಲು ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ 55 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ, ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಿಂದಾಗಿ ಸಂಭವಿಸುತ್ತದೆ. ಆದ್ರೆ ಪುರುಷರಿಗಿಂತ ಮಹಿಳೆಯರಲ್ಲಿ ಕಾಣಿಸಿಕೊಂಡ್ರೆ ದೃಷ್ಟಿ ಸಂಪೂರ್ಣವಾಗಿ ಕಳೆದುಕೊಳ್ಳುವ ಅಪಾಯವೇ ಹೆಚ್ಚಾಗಿರುತ್ತದೆ.

CRVO ಗೆ ಚಿಕಿತ್ಸೆ ಏನು?
* ಇಂಟ್ರಾವಿಟ್ರಿಯಲ್ ಇಂಜೆಕ್ಷನ್‌ಗಳು: VEGF ಇಂಜೆಕ್ಷನ್‌ಗಳು ರೆಟಿನಾದ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಲೇಸರ್ ಚಿಕಿತ್ಸೆ (ಫೋಟೊಕೊಗ್ಯುಲೇಶನ್): ರಕ್ತನಾಳಗಳ ಸೋರಿಕೆಯನ್ನು ತಡೆಯಲು ಬಳಸಲಾಗುತ್ತದೆ.
* ಸ್ಟೀರಾಯ್ಡ್‌ಗಳು: ದೀರ್ಘಕಾಲದ ಮ್ಯಾಕ್ಯುಲರ್ ಎಡಿಮಾಗೆ ಚಿಕಿತ್ಸೆ ನೀಡಲು.
CRVO ಸಂಭವಿಸಲು ಕಾರಣಗಳೇನು?
ಕೊಲೆಸ್ಟ್ರಾಲ್ (ಕೊಬ್ಬು) ಶೇಖರಣೆ ಮತ್ತು ಧೂಮಪಾನ ಇವೆರಡೂ ರಕ್ತನಾಳಗಳನ್ನ ಹಾನಿಗೊಳಿಸುತ್ತದೆ. ರಕ್ತವನ್ನು ಮಂದವಾಗಿಸುತ್ತದೆ ನಂತರ ಹೆಪ್ಪುಗಟ್ಟಿಸುತ್ತದೆ. ಇದರಿಂದ ಕಣ್ಣು ಕಳೆದುಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಈ ಸಮಸ್ಯೆ ಕಾಣಿಸಿಕೊಂಡ ನಂತರ ಹೆಚ್ಚಿದ ಕಣ್ಣಿನ ಒತ್ತಡವು ರಕ್ತನಾಳದ ನಿರ್ಗಮನ ಮಾರ್ಗವನ್ನು (ರಕ್ತಚಲನೆಯ ಮಾರ್ಗ) ನಿರ್ಬಂಧಿಸುತ್ತದೆ, ಇದರಿಂದಾಗಿ ರಕ್ತ ಹೆಪ್ಪುಗಟ್ಟುತ್ತದೆ. ಅದೇನೇ ಇರಲಿ, ದೇಹದ ಸೂಕ್ಷ್ಮ ಅಂಗಗಳಲ್ಲಿ ಒಂದಾಗಿರುವ ಕಣ್ಣಿನ ಬಗ್ಗೆ ಎಚ್ಚರ ವಹಿಸುವುದು ಅಗತ್ಯವಾಗಿದೆ.

