– ಚಾಮರಾಜನಗರದಲ್ಲಿ ರೈತ ಸಂಘಟನೆಗಳಿಂದ ಅನಿರ್ದಿಷ್ಟಾವಧಿ ಧರಣಿ
ಚಾಮರಾಜನಗರ: ಪರ ವಿರೋಧ ಹೋರಾಟಗಳ ನಡುವೆ ಬಂಡೀಪುರದಲ್ಲಿ (Bandipur) ಸಫಾರಿ (Safari) ಪುನಾರಂಭಗೊಂಡಿದೆ. ಸಫಾರಿಗೆ ರೈತ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಪೊಲೀಸ್ ಸರ್ಪಗಾವಲಿನಲ್ಲಿ ಸಫಾರಿ ಪುನಾರಂಭ ಮಾಡಲಾಗಿದ್ದು, ಪ್ರವಾಸಿಗರು ಸಂತಸಗೊಂಡಿದ್ದಾರೆ.

ಬಂಡೀಪುರ ಹಾಗೂ ನಾಗರಹೊಳೆ (Nagarahole) ವ್ಯಾಪ್ತಿಯಲ್ಲಿ ಹುಲಿಗಳ ದಾಳಿಗೆ ಮೂವರು ರೈತರು ಬಲಿಯಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಮತ್ತೆ ಆರಂಭಿಸಲಾಗಿದೆ. ಸಫಾರಿ ಪುನಾರಂಭಕ್ಕೆ ರೈತ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಬಂಡೀಪುರ ಸಫಾರಿ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸ್ ಸರ್ಪಗಾವಲಿನಲ್ಲಿ ಸಫಾರಿ ಆರಂಭಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದಿಂದ ಬಂಡೀಪುರ ಅರಣ್ಯ ಪ್ರವೇಶ ದ್ವಾರದವರೆಗೂ ಸಫಾರಿ ವಾಹನಗಳಿಗೆ ಪೊಲೀಸ್ ಎಸ್ಕಾರ್ಟ್ ನೀಡಲಾಗುತ್ತಿದೆ. ಕೆಲವು ಮಾರ್ಪಾಡುಗಳೊಂದಿಗೆ ಸಫಾರಿ ಆರಂಭಿಸಲಾಗಿದ್ದು, 50%ರಷ್ಟು ವಾಹನಗಳನ್ನು ಮಾತ್ರ ಬಳಸಲಾಗುತ್ತಿದೆ. ಹಿಂದೆ ಎಂಟು ಗಂಟೆ ಇದ್ದ ಸಫಾರಿ ಅವಧಿಯನ್ನು 5 ಗಂಟೆಗೆ ಇಳಿಸಲಾಗಿದೆ. ಬೆಳಿಗ್ಗೆ 6:30ರಿಂದ 9 ಹಾಗೂ ಸಂಜೆ 3:30ರಿಂದ 6 ಗಂಟೆಯವರೆಗೆ ಸಮಯ ನಿಗದಿಗೊಳಿಸಲಾಗಿದೆ. ಇದನ್ನೂ ಓದಿ: ಶೇಷಾದ್ರಿಪುರಂನಲ್ಲಿ ಕೆನರಾ ಬ್ಯಾಂಕ್ ಕನ್ನ ಯತ್ನ ವಿಫಲ – ಗ್ರಿಲ್ ಕೊರೆದು ನುಗ್ಗಿದ ಕಳ್ಳರು

ಇನ್ನೂ ಮೂರು ತಿಂಗಳ ಬಳಿಕ ಪುನಾರಂಭಗೊಂಡ ಸಫಾರಿಗೆ ಮೊದಲ ದಿನವೇ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಪ್ರವಾಸಿಗರ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಸಫಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಾಕೃತಿಕವಾಗಿ ವನ್ಯಪ್ರಾಣಿಗಳನ್ನು ವೀಕ್ಷಿಸಲು ಪ್ರವಾಸಿಗರು ತುಂಬಾ ಕಾತುರರಾಗಿದ್ದು ಕಂಡುಬಂತು. ಇದನ್ನೂ ಓದಿ: ಮಹದೇವಪ್ಪನವರು ನಮ್ಮ ರಾಷ್ಟ್ರೀಯ ನಾಯಕರು, ಇಲ್ಲಿಂದಲೇ ನಮಸ್ಕರಿಸುತ್ತೇನೆ: ತಲೆಬಾಗಿದ ಡಿಕೆಶಿ

ಇನ್ನು ಸಫಾರಿ ಪುನಾರಂಭಕ್ಕೆ ಚಾಮರಾಜನಗರದಲ್ಲಿ ರೈತ ಸಂಘಟನೆಗಳು ಅನಿರ್ದಿಷ್ಟಾವಧಿ ಧರಣಿ ನಡೆಸಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗಿದೆ. ಅರಣ್ಯ ಮಂತ್ರಿಗಳು ರೆಸಾರ್ಟ್ ಮಾಲೀಕರ ಆಮಿಷಕ್ಕೆ ಒಳಗಾಗಿದ್ದಾರೆ. ಸಫಾರಿ ಆರಂಭಕ್ಕೆ ವರದಿ ನೀಡಿರುವ ತಾಂತ್ರಿಕ ಸಮಿತಿ ಯಾವ ರೈತರಿಂದಲೂ ಮಾಹಿತಿ ಸಂಗ್ರಹಿಸಿಲ್ಲ. ಸಫಾರಿ ಸ್ಥಗಿತಗೊಳಿಸಿದ್ದಾಗ ಸಂಘರ್ಷ ಕಡಿಮೆಯಾಗಿತ್ತು. ಈಗ ಮತ್ತೆ ಸಫಾರಿ ಆರಂಭದಿಂದ ಸಂಘರ್ಷ ಹೆಚ್ಚಾಗಲಿದೆ. ರೈತರ ಪ್ರಾಣದ ಜೊತೆ ಅರಣ್ಯ ಇಲಾಖೆ ಚೆಲ್ಲಾಟವಾಡುತ್ತಿದೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಫೆ.25ರಂದು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಜೆಎನ್‌ಯು ಉದ್ವಿಘ್ನ – ಎಡ, ಬಲಪಂಥೀಯ ವಿದ್ಯಾರ್ಥಿಗಳ ನಡುವೆ ಸಂಘರ್ಷ

