ನವದೆಹಲಿ: ಭಾರತದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನದ (Pakistan) ಐಸಿಸ್ (ISI), ಬಾಂಗ್ಲಾದೇಶದೊಂದಿಗೆ (Bangladesh) ಸಂಪರ್ಕ ಹೊಂದಿರುವ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಉಡುಪು ಉತ್ಪಾದನಾ ಘಟಕಗಳಿಂದ ಮಿಜಾನೂರ್ ರೆಹಮಾನ್, ಮೊಹಮ್ಮದ್ ಶಬತ್, ಉಮರ್, ಮೊಹಮ್ಮದ್ ಲಿಟನ್, ಮೊಹಮ್ಮದ್ ಶಾಹಿದ್ ಮತ್ತು ಮೊಹಮ್ಮದ್ ಉಜ್ಜಲ್ ಎಂಬ ಆರು ಶಂಕಿತರನ್ನು ಬಂಧಿಸಲಾಗಿದ್ದು, ಇಬ್ಬರನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ. ಬಂಧಿತ ಶಂಕಿತರಲ್ಲಿ ಬಾಂಗ್ಲಾದೇಶಿ ಪ್ರಜೆಯೂ ಸೇರಿದ್ದಾರೆ. ಇದನ್ನೂ ಓದಿ: ದೆಹಲಿಯ ಕೆಂಪು ಕೋಟೆ, ಪ್ರಮುಖ ಧಾರ್ಮಿಕ ಸ್ಥಳಗಳ ಸ್ಫೋಟಕ್ಕೆ ಎಲ್‌ಇಟಿ ಸಂಚು
ಆರೋಪಿಗಳು ಗುರುತಿನ ಚೀಟಿಗಾಗಿ ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸುತ್ತಿದ್ದರು. ಶಂಕಿತರಿಂದ ಎಂಟು ಮೊಬೈಲ್ ಫೋನ್‌ಗಳು ಮತ್ತು 16 ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡು ಪೊಲೀಸರು ಶಂಕಿತರನ್ನು ಬಂಧಿಸಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಸಂಘಟನೆಯು ದೆಹಲಿಯ ಕೆಂಪು ಕೋಟೆ ಮತ್ತು ಚಾಂದನಿ ಚೌಕ್‌ನಲ್ಲಿರುವ ದೇವಾಲಯ ಸೇರಿದಂತೆ ದೇಶಾದ್ಯಂತ ಇತರ ಪ್ರಮುಖ ಧಾರ್ಮಿಕ ಸ್ಥಳಗಳ ಬಳಿ ಸ್ಫೋಟಕ್ಕೆ ಸಂಚು ರೂಪಿಸಿದೆ ಎಂದು ಮೂಲಗಳು ಎಚ್ಚರಿಸಿದ್ದವು. ಹೀಗೆ ತಿಳಿಸಿದ ಒಂದು ದಿನದ ಬೆನ್ನಲ್ಲೇ 8 ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕಾರಿನಲ್ಲಿ ತೆರಳುತ್ತಿದ್ದ ರಾಹುಲ್ ಗಾಂಧಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರು
ಫೆ.6 ರಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 31 ಜನರು ಸಾವನ್ನಪ್ಪಿ, 160 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆಗೆ ಸೇಡು ತೀರಿಸಿಕೊಳ್ಳಲು ಈ ಸಂಘಟನೆ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಇಸ್ಲಾಮಿಕ್ ಸ್ಟೇಟ್ ಗುಂಪು ಮಸೀದಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.

