– ಮತ್ತೆ ಶಾಂತಿ ಸಭೆ ವಿಫಲ
ಬಾಗಲಕೋಟೆ: ನಗರದಲ್ಲಿ (Bagalkote) ಫೆ.19 ರಂದು ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತನೊಬ್ಬನನ್ನು ಪೊಲೀಸರು (Bagalkote Police) ಬಂಧಿಸಿದ್ದಾರೆ. ಬಂಧನದ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್‌ನಿಂದ ಬಿದ್ದು ಯುವಕ ಕೈ ಮುರಿದುಕೊಂಡಿದ್ದಾನೆ.
ಬಂಧಿತನನ್ನು ಅಶೋಕ್ ಬಾರಕೇರ (23) ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿ ಹೊರಟಿದ್ದ ಹಿಂದೂ ಕಾರ್ಯಕರ್ತನನ್ನು ಪೊಲೀಸರು ಬೆನ್ತತ್ತಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು, ಎಡಗೈ ಮುರಿದಿದೆ. ಅಂಬೇಡ್ಕರ್ ಭವನದ ಬಳಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಬಾಗಲಕೋಟೆಯ ಫಿಶ್, ತರಕಾರಿ ಮಾರ್ಕೆಟ್ ಮೇಲೆ ಕಲ್ಲು ತೂರಾಟ – ಪೊಲೀಸರಿಂದ ಲಾಠಿ ಚಾರ್ಜ್
ಗಾಯಾಳು ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಕೈಗೆ ವೈದ್ಯರು ಬ್ಯಾಂಡೇಜ್ ಹಾಕಿದ್ದಾರೆ. ನಂತರದ ಹಂತದಲ್ಲಿ ಆಪರೇಷನ್ ಮಾಡಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಇನ್ನೂ ಪೊಲೀಸರ ವಿರುದ್ಧ ಲಾಠಿಯಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ, ಪೊಲೀಸರ ನಡೆ ಸರಿ ಇಲ್ಲ. ಈ ರೀತಿ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ನಾವು ಯಾರನ್ನೂ ಬಂಧಿಸಲ್ಲ ಅಂತ ಎಸ್ಪಿ ಹೇಳಿದ್ರೂ. ಆದ್ರೆ ಇದೀಗ ಈ ರೀತಿ ಕೆಲಸ ಶುರು ಮಾಡಿದ್ದಾರೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮತ್ತೆ ಶಾಂತಿ ಸಭೆ ವಿಫಲ
ಬಾಗಲಕೋಟೆಯ ಕಿತ್ತಾ ಓಣಿಯಲ್ಲಿ ಶಿವಾಜಿ ಜಯಂತಿ (Shivaji Jayanti) ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ (Stone pelting) ಸಂಚಲನ ಮೂಡಿಸಿದೆ. ಫೆ.20ರಂದು ಕರೆದಿದ್ದ ಶಾಂತಿ ಸಭೆ ವಿಫಲ ಬೆನ್ನಲ್ಲೇ ಇಂದೂ ಸಹ ಡಿಸಿ ಕಚೇರಿ ಸಭಾಂಗಣದಲ್ಲಿ ಶಾಂತಿ ಸಭೆ ಕರೆಯಲಾಗಿತ್ತು. ಆದ್ರೆ ಇಂದಿನ ಸಭೆಗೆ ಹಿಂದೂ ಮತ್ತು ಬಿಜೆಪಿ ಮುಖಂಡರು ಯಾರೂ ಸರಿಯಾಗಿ ಬಾರದ ಕಾರಣ ಇಂದಿನ ಸಭೆ ಕೂಡ ವಿಫಲವಾಗಿದೆ.
ಪಂಕಾ ಮಸೀದಿ ಬೀದಿಯಲ್ಲಿ ವಾತಾವರಣ ಸಹಜ ಸ್ಥಿತಿಗೆ ಬಂದಿದ್ದು, ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಮಸೀದಿ ಹಾಗೂ ದೇವಸ್ಥಾನದ ಸುತ್ತ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟ ಬಾಗಲಕೋಟೆ ಎಸ್‍ಪಿ ಪರಿಶೀಲನೆ ನಡೆಸಿದ್ರು. ಆದ್ರೆ ಮಸೀದಿ ಅಕ್ಕಪಕ್ಕದ ಶಾಲೆಗಳು ಖಾಲಿ ಖಾಲಿಯಾಗಿವೆ. ಮತ್ತೆ ಗಲಾಟೆಯಾಗೋ ಆತಂಕದಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕ್ತಿದ್ದಾರೆ. ಇತ್ತ, ಶಿವಾಜಿ ಜಯಂತಿ ವೇಳೆ ನಡೆದ ಕಲ್ಲು ತೂರಾಟದಲ್ಲಿ ಗಾಯಗೊಂಡ ಹಿಂದೂ ಕಾರ್ಯಕರ್ತ ಪ್ರಕಾಶ್ ಕಲ್ಲೇಟಿನ ಸತ್ಯ ಬಿಚ್ಚಿಟ್ಟಿದ್ದಾರೆ. ಇನ್ನು, ಪರಿಸ್ಥಿತಿ ಶಾಂತವಾಗಿದೆ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ರೆ, ಕಾಂಗ್ರೆಸ್-ಬಿಜೆಪಿ ನಡುವೆ ಕೆಸರೆರಚಾಟ ಮುಂದುವರೆದಿದೆ. ಇದನ್ನೂ ಓದಿ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ – ಬಾಗಲಕೋಟೆಯಲ್ಲಿ ನಿಷೇಧಾಜ್ಞೆ ಜಾರಿ

