– ನಮ್ಮ ಪಕ್ಷ ಎಂದೂ ಲಂಚ ಸ್ವೀಕರಿಸಿ ಅಂದಿಲ್ಲ: ಛಲವಾದಿ ನಾರಾಯಣಸ್ವಾಮಿ
ಗದಗ: ರಾಜ್ಯ ಸರ್ಕಾರದ ವಿರುದ್ಧ ನಿರಂತರ ಕಮಿಷನ್ ಆರೋಪ ಮಾಡುತ್ತಿದ್ದ ಬಿಜೆಪಿಗೆ ಈಗ ಭಾರೀ ಮುಖಭಂಗವಾಗಿದೆ. ತಮ್ಮದೇ ಪಕ್ಷದ ಶಾಸಕ ಕಮಿಷನ್ ಪಡೆಯುವಾಗ ಸಿಕ್ಕಿಬಿದ್ದಿದ್ದು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಸಣ್ಣನೀರಾವರಿ ಇಲಾಖೆ (Minor Irrigation Department) ಕಾಮಗಾರಿ ಗುತ್ತಿಗೆ ನೀಡಲು 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ (Chandru Lamani) ಸೇರಿ ಮೂವರನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಶಾಸಕರ ಬಂಧನದ ಬೆನ್ನಲ್ಲೇ ಇನ್ನಷ್ಟು ಸ್ಫೋಟಕ ಮಾಹಿತಿಗಳು ಬಯಲಾಗಿವೆ. ಸ್ಪೀಕರ್ ಯು.ಟಿ ಖಾದರ್ ಅವರಿಗೆ ಚಂದ್ರು ಲಮಾಣಿ ಬಂಧನದ ಮಾಹಿತಿಯನ್ನ ಲೋಕಾಯುಕ್ತ ಅಧಿಕಾರಿಗಳೇ ರವಾನೆ ಮಾಡಲಾಗಿದೆ. ಇದನ್ನೂ ಓದಿ: 5 ಲಕ್ಷ ಕಮಿಷನ್ ಪಡೆಯುವಾಗ ಲಾಕ್ – ʻಲೋಕಾʼ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ
ಟ್ರ್ಯಾಪ್‌ಗೆ ಸಿಲುಕಿಸಿದ್ದು ಹೇಗೆ?
ರಸ್ತೆ ಬದಿ ತಡೆಗೋಡೆ ನಿರ್ಮಾಣ ಸಂಬಂಧ 1 ಕೋಟಿ ಮೊತ್ತದ ಕಾಮಗಾರಿಗೆ ಶಾಸಕ ಲಮಾಣಿ, ಕ್ಲಾಸ್-1 ಗುತ್ತಿಗೆದಾರ (Contractor) ವಿಜಯ ಪೂಜಾರ ಅವರ ಬಳಿ 11 ಲಕ್ಷ ರೂ. ಕಮಿಷನ್‌ಗೆ ಬೇಡಿಕೆಯಿಟ್ಟಿದ್ದರು. ಕಮಿಷನ್ ಕೊಡಲು ಇಷ್ಟವಿಲ್ಲದ ಪೂಜಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಎಸ್ಪಿ ಸಿದ್ದಲಿಂಗಪ್ಪ ಅಂಡ್ ಟೀಂ ಶಾಸಕರ ಬಂಧನಕ್ಕೆ ಬಲೆ ಬೀಸಿತ್ತು. ಅದರಂತೆ ಇಂದು ಲಂಚ ಪಡೆಯುವಾಗ ಶಾಸಕರೂ ಹಾಗೂ ಇಬ್ಬರು ಪಿಎಗಳಾದ ಮಂಜುನಾಥ್ ವಾಲ್ಮೀಕಿ ಹಾಗೂ ಗುರುನಾಯ್ಕ್‌ನನ್ನ ಬಂಧಿಸಿದ್ದಾರೆ.
ಚಂದ್ರು ಲಮಾಣಿ ಮನೆ ಮೇಲೂ ದಾಳಿ
ಬಾಲಾಜಿ ಆಸ್ಪತ್ರೆಯಲ್ಲಿ ಶಾಸಕ ಚಂದ್ರು ಲಮಾಣಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಹಿನ್ನೆಲೆ ಅವರ ಮನೆ ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ತಾರ್ಕಿಕ ನಿರ್ಧಾರಕ್ಕೆ ಬಂದಿದೆ, ಶೀಘ್ರ ನಿರ್ಧಾರ ಪ್ರಕಟಿಸಬಹುದು: ಸತೀಶ್ ಜಾರಕಿಹೊಳಿ
2 ದಿನದ ಹಿಂದೆಯೇ ಸಿಕ್ಕಿಬಿದ್ದಿದ್ದ ಲಮಾಣಿ
ಲೋಕಾಯುಕ್ತ ಅಧಿಕಾರಿಗಳ ಮಾಹಿತಿ ಪ್ರಕಾರ, 2 ದಿನಗಳ ಹಿಂದೆಯೇ ಆಡಿಯೋದಲ್ಲಿ ಚಂದ್ರು ಲಮಾಣಿ ಸಿಕ್ಕಿಬಿದ್ದಿದ್ರು. ಹಣಕ್ಕೆ ಬೇಡಿಕೆಯಿಟ್ಟಿದ್ದ ಆಡಿಯೋ ಲಭ್ಯವಾಗಿತ್ತು. ಆಡಿಯೋ ಆಧರಿಸಿ ಎಫ್‌ಐಆರ್ ಕೂಡ ದಾಖಲಿಸಲಾಗಿತ್ತು. ಇಂದು ಮುಂಗಡ ಹಣ ನೀಡುವಾಗ ಟ್ರ್ಯಾಪ್ ಮಾಡಿ ಶಾಸಕರನ್ನ ಖೆಡ್ಡಕ್ಕೆ ಕೆಡವಲಾಗಿದೆ. ಇದನ್ನೂ ಓದಿ: 20 ಗಂಟೆಗಳ ವಿಚಾರಣೆ ಬಳಿಕ ಸ್ನೇಹಮಯಿ ಕೃಷ್ಣರನ್ನ ಬಿಟ್ಟು ಕಳಿಸಿದ ಸೈಬರ್ ಕ್ರೈಂ ಪೊಲೀಸರು
ನನ್ನ ಗಮನಕ್ಕೆ ಬಂದಿಲ್ಲ ಎಂದ ಛಲವಾದಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಈ ಬಗ್ಗೆ ಮಾತನಾಡಿ, ಲಮಾಣಿ ಅವರ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ನಮ್ಮ ಪಕ್ಷ ಎಂದೂ ಸಹ ಲಂಚ ಸ್ವೀಕಾರ ಮಾಡಿ ಅಂತ ಹೇಳಿಲ್ಲ. ಇದರ ಹಿಂದೆ ಸತ್ಯಾಸತ್ಯತೆ ಏನಿದೆ ಅಂತಾ ಪರಿಶೀಲನೆ ಮಾಡಬೇಕಿದೆ ಎಂದು ಹೇಳಿದ್ದಾರೆ.

