ಬೆಂಗಳೂರು: ಜೈಲಲ್ಲಿದ್ದವನು ಪೆರೋಲ್ ಮೇಲೆ ಬಂದು ಮನೆಯೊಂದನ್ನ ದರೋಡೆ ಮಾಡಿ, ಏನೂ ಗೊತ್ತಿಲ್ಲದವನಂತೆ ಮಾರನೆ ದಿನ ಜೈಲು ಸೇರಿದ್ದ. ಪೊಲೀಸ್ ಸಮವಸ್ತ್ರದಲ್ಲಿ ಮನೆಯನ್ನ ದರೋಡೆ ಮಾಡಿದ್ದ ಕೇಸಲ್ಲಿ ಪೊಲೀಸರಿಗೆ ಬಹುದೊಡ್ಡ ಲೀಡ್ ಸಿಕ್ಕಿದೆ.
ಬೆಂಗಳೂರಿನ ಬ್ಯಾಡರಹಳ್ಳಿ ಬಿಇಎಲ್ ಲೇಔಟ್‌ನ ಹೊಂಬಾಳೆಗೌಡ ಮನೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ನಡೆದಿದ್ದ ದರೋಡೆ ಪ್ರಕರಣ ಸಂಬಂಧ ಪೊಲೀಸರಿಗೆ ಬಹುದೊಡ್ಡ ಲೀಡ್ ಸಿಕ್ಕಿದೆ. ಕೈಕಾಲುಗಳಿಗೆ ಟೇಪ್ ಸುತ್ತಿ ಪಿಸ್ತೂಲ್ ತೋರಿಸಿ ಮನೆ ರಾಬರಿ ಮಾಡಿ 20 ಲಕ್ಷ ನಗದು, ಅರ್ಧ ಕೆಜಿ ಚಿನ್ನ ದೋಚಲಾಗಿತ್ತು. ಇದೀಗ ಆರೋಪಿ ಯಾರು ಎನ್ನುವುದನ್ನು ಬ್ಯಾಡರಹಳ್ಳಿ ಪತ್ತೆ ಮಾಡಿದ್ದಾರೆ. ಟೆಕ್ನಿಕಲ್ ಎವಿಡೆನ್ಸ್‌ನ ಮಹತ್ವದ ಸುಳಿವಿನ ಮೇಲೆ ರಾಬರ್ಸ್‌ನ ನಡೆಗೆ ಒಂದು ಕ್ಷಣ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಏಕೆಂದರೆ, ಪೊಲೀಸರಿಗೆ ಸಿಕ್ಕ ಎವಿಡೆನ್ಸ್ ಜೈಲಲ್ಲಿ ಇರುವ ಕೈದಿಯದ್ದು. ಇದನ್ನೂ ಓದಿ: ಚಿಕ್ಕಮಗಳೂರು ಸೆಂಟ್ರಲ್ ಬ್ಯಾಂಕ್‌ಲ್ಲಿ ಮಹಾ ಮೋಸ – ಗ್ರಾಹಕರ ಅಸಲಿ ಚಿನ್ನವೇ ಮಾಯ!
ಕೈದಿ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಮುಂದಾದಾಗ ಪೊಲೀಸರಿಗೆ ಮತ್ತೊಂದು ಶಾಕ್ ಕಾದಿತ್ತು. ಪೆರೋಲ್ ಮೇಲೆ ಹೊರಗಡೆ ಬಂದಿದ್ದು, ಪುನಃ ಜೈಲಿಗೆ ವಾಪಸ್ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ರಾಬರಿ ಆದ ಮರುದಿನವೇ ವಾಪಸ್ ಜೈಲಿಗೆ ಹೋಗಿದ್ದು, ರಾಬರಿ ಮಾಡಿದ್ದ ಹಣ, ಒಡವೆಯನ್ನು ಹೆಂಡತಿ ಹಾಗೂ ಆಪ್ತರಿಗೆ ನೀಡಿ ಮತ್ತೆ ಜೈಲು ಸೇರಿದ್ದ. ಇದೀಗ ಬಾಡಿವಾರೆಂಟ್ ಮೇಲೆ ಕೈದಿಯನ್ನ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.
ಹೊಂಬಾಳೆಗೌಡ ಮನೆಯಲ್ಲಿ ಹಣ ಇರುವ ವಿಚಾರ ಕೈದಿಗೆ ಗೊತ್ತಾಗಿದ್ದು ಹೇಗೆ ಎನ್ನುವ ಅನುಮಾನ ಮೂಡಿದ್ದು, ಕುಟುಂಬಸ್ಥರ ಮೇಲೂ ಶಂಕೆ ವ್ಯಕ್ತವಾಗಿದೆ. ಜಮೀನು ಮಾರಾಟ ಮಾಡಿ ಒಂದೂವರೆ ಕೋಟಿ ಹಣವನ್ನು ಹೊಂಬಾಳೆಗೌಡ ಮನೆಯಲ್ಲೇ ಇಟ್ಟಿದ್ದರು. ಮನೆಯಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಹಣ ಇತ್ತು. ಆದರೆ, ಅದರಲ್ಲಿ 20 ಲಕ್ಷ ಹಣ ಹಾಗೂ ಅರ್ಧ ಕೆ.ಜಿ ಚಿನ್ನ ಮಾತ್ರ ರಾಬರಿ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 23.8 ಕೋಟಿ ಮೌಲ್ಯದ ಕೊಕೇನ್ ಜಪ್ತಿ
ಸದ್ಯ ಪ್ರಕರಣ ಸಂಬಂಧ ಕೈದಿಯನ್ನು ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆಯಲಾಗಿದ್ದು, ಈತನಿಗೆ ಸಹಕಾರ ನೀಡಿದ ಕುಟುಂಬಸ್ಥರ ಪತ್ತೆಕಾರ್ಯ ಮಾಡಬೇಕಿದೆ.

