ಗುರುಗ್ರಾಮ: ವ್ಯಾಲೆಂಟೈನ್ಸ್ ಡೇ ಆಚರಣೆ ಮಾಡಿದ ಕೆಲವೇ ಗಂಟೆಗಳ ನಂತರ ಗರ್ಭಿಣಿಯಾಗಿದ್ದ ತನ್ನ ಹೆಂಡತಿಯನ್ನು ಕೊಂದು, ದರೋಡೆಯಂತೆ ನಾಟಕ ಮಾಡಿದ ಆರೋಪದ ಮೇಲೆ ಚಾರ್ಟರ್ಡ್ ಅಕೌಂಟೆಂಟ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಹರಿಯಾಣದ ಝಜ್ಜರ್ ಜಿಲ್ಲೆಯ ಬಡ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೀಡಿತೆ ಮೇಹಕ್ (27 ವರ್ಷ), ಗುರುಗ್ರಾಮ್ನಲ್ಲಿ ಖಾಸಗಿ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಎರಡು ತಿಂಗಳ ಗರ್ಭಿಣಿಯಾಗಿದ್ದರು. ಆರೋಪಿ ಅಂಶುಲ್ ಧವನ್ ಹಿಸಾರ್ ಮೂಲದ ಚಾರ್ಟರ್ಡ್ ಅಕೌಂಟೆಂಟ್, ಗುರುಗ್ರಾಮ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು ಕಳೆದ ಸೆಪ್ಟೆಂಬರ್ನಲ್ಲಿ ಮದುವೆಯಾಗಿದ್ದರು. ಇದನ್ನೂ ಓದಿ: ವ್ಯಾಲೆಂಟೆನ್ಸ್ ಡೇ ಪಾರ್ಟಿ ಮುಗಿಸಿ ಪತ್ನಿಯ ಕತ್ತು ಸೀಳಿ ಕೊಂದ ಪಾಪಿ ಪತಿ – ಶೀಲ ಶಂಕಿಸಿ ಕೃತ್ಯ
ಫೆಬ್ರವರಿ 14ರ ವ್ಯಾಲೆಂಟೈನ್ಸ್ ಡೇಯಂದು ದಂಪತಿ ಹಿಸಾರ್ನಲ್ಲಿ ಆಚರಣೆ ಮಾಡಿ, ಫೆಬ್ರವರಿ 15ರ ಸಂಜೆ ಹ್ಯಾನ್ಸಿಯಿಂದ ಗುರುಗ್ರಾಮ್ಗೆ ಕಾರಿನಲ್ಲಿ ಮರಳುತ್ತಿದ್ದರು. ಬಡ್ಲಿ ಸಮೀಪದ ಪಹ್ಸೌರ್ ಗ್ರಾಮದ ಬಳಿ ಕಾಲುವೆ ಸಮೀಪ ಅಂಶುಲ್ ಡಯಲ್ 112ಗೆ ಕರೆ ಮಾಡಿ, ‘ಅಪರಿಚಿತರು ಕಾರನ್ನು ನಿಲ್ಲಿಸಿ ದಾಳಿ ಮಾಡಿ, ಹೆಂಡತಿಯ ಗಂಟಲು ಸೀಳಿ ಕೊಂದು ಕಾರನ್ನು ದೋಚಿಕೊಂಡು ಹೋದರು’ ಎಂದು ದೂರು ನೀಡಿದ್ದರು.
ಆದರೆ, ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಅಂಶುಲ್ನ ಹೇಳಿಕೆಯಲ್ಲಿ ಬಹಳ ವ್ಯತ್ಯಾಸ ಕಂಡುಬಂದವು. ಸತತ ವಿಚಾರಣೆಯ ನಂತರ ಅಂಶುಲ್ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ತಾನು ಮುಂಚಿತವಾಗಿ ಪ್ಲ್ಯಾನ್ ಮಾಡಿ, ಮೊದಲು ಗಂಟಲು ಹಿಸುಕಿ ಕೊಂದು ನಂತರ ಗಂಟಲು ಸೀಳಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ದೃಢ ಸಾಕ್ಷ್ಯಗಳನ್ನು ತಪ್ಪಿಸಲು ಗ್ಲೌವ್ಸ್ ಧರಿಸಿದ್ದೆನೆಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಗರ್ಲ್ಫ್ರೆಂಡ್ ಕೊಂದು ಆತ್ಮದ ವಶೀಕರಣಕ್ಕೆ ಯತ್ನ – ಮಧ್ಯಪ್ರದೇಶದಲ್ಲೊಂದು ವಿಚಿತ್ರ ಘಟನೆ
ಮೇಹಕ್ ಬ್ಯಾಂಕ್ ಸಹೋದ್ಯೋಗಿಗಳೊಂದಿಗೆ ಫೋನ್ ಮಾತುಕತೆ ನಡೆಸುತ್ತಿದ್ದಳು. ಈ ಹಿನ್ನೆಲೆ ಆಕೆಯ ಮೇಲೆ ಸಂಶಯಪಡುತ್ತಿದ್ದ. ಇದರಿಂದಾಗಿ ಇಬ್ಬರ ನಡುವೆ ಜಗಳಗಳು ಸಾಮಾನ್ಯವಾಗಿದ್ದವು ಎಂದು ಬಡ್ಲಿ ಠಾಣಾಧಿಕಾರಿ ಸುರೇಶ್ ಕುಮಾರ್ ಹೇಳಿದ್ದಾರೆ. ಮೇಹಕ್ಳ ಸಹೋದರ ಅಕ್ಷಯ್ ದೂರು ನೀಡಿದ್ದರ ಮೇಲೆ ಎಫ್ಐಆರ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ಗೆ ಕೊಂಡೊಯ್ಯಲಾಗುತ್ತಿದೆ.

