ಶ್ರೀನಗರ: ಭದ್ರತಾ ಪಡೆಗಳಿಂದ (Indian Army) ತಪ್ಪಿಸಿಕೊಳ್ಳಲು ಜೈಶ್-ಎ-ಮೊಹಮ್ಮದ್ ಕಮಾಂಡರ್ ಸೈಫುಲ್ಲಾ (Jaish-e-Mohammed commander Saifullah) ಊಸರವಳ್ಳಿಯಂತೆ ವೇಷ ಬದಲಿಸಿದ್ದಾನೆ. ಗುಪ್ತಚರ ಮಾಹಿತಿ ಪ್ರಕಾರ ಗುರುತು ತಪ್ಪಿಸಿಕೊಳ್ಳಲು ಅವನ ಟ್ರೇಡ್‌ಮಾರ್ಕ್ ಆಗಿದ್ದ ಗಡ್ಡವನ್ನು ಬೋಳಿಸಿಕೊಂಡು ತಿರುಗಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಫುಲ್ಲಾ ತಲೆಯನ್ನೂ ಬೋಳಿಸಿಕೊಂಡಿರುವ ಸಾಧ್ಯತೆ ಇದೆ. ಅವನು ಮಹಿಳೆಯರ ಉಡುಪು ಮತ್ತು ಬುರ್ಖಾಗಳನ್ನು ಖರೀದಿಸಿದ್ದಾನೆ. ತಪ್ಪಿಸಿಕೊಳ್ಳಲು ಈ ರೀತಿಯ ಪ್ಲ್ಯಾನ್ ಮಾಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಮೆಹ್ತಾ ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ – ಇಬ್ಬರು ಜೈಶ್ ಉಗ್ರರು ಬಲಿ
ಸೈಫುಲ್ಲಾ ಸೇಫ್ ಆಗಲು ಮತ್ತೂಂದು ತಂತ್ರ ಬಳಸುತ್ತಾನೆ. ಅದೇನೂ ಅಂದ್ರೆ ಧರ್ಮ ಗುರುವಾಗಿ ನಟಿಸುತ್ತಾನೆ. ಈ ಮೂಲಕ ಗ್ರಾಮೀಣ ಜನರ ನಂಬಿಕೆಯನ್ನು ಬಳಸಿಕೊಳ್ಳುತ್ತಾನೆ. ಕೆಲವು ಸ್ಥಳೀಯರು ಅವನಿಗೆ ಆಧ್ಯಾತ್ಮಿಕ ವ್ಯಕ್ತಿಯ ಸ್ಥಾನಮಾನವನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ತಿಂಗಳಿನಿಂದ ಭದ್ರತಾ ಪಡೆಗಳು ಸೈಫುಲ್ಲಾ ಮತ್ತು ಅವನ ಗ್ಯಾಂಗ್‌ನ್ನು ಹಿಡಿಯಲು ಕಿಶ್ತ್ವಾರ್, ದೋಡಾದ ಪ್ರತಿಯೊಂದು ಸ್ಥಳದಲ್ಲೂ ಹುಡುಕುತ್ತಿದ್ದಾರೆ. ಎರಡು ವರ್ಷಗಳಿಂದ ಅವನೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನಿ ಜೈಶ್ ಕಮಾಂಡರ್ ಆದಿಲ್‌ನ ಹತ್ಯೆಯ ನಂತರ ಆತ ಹತಾಶೆಗೊಂಡಿದ್ದಾನೆ. ಅವನ ಅಡಗುತಾಣವನ್ನು ಭೇದಿಸಿ ಆಹಾರ ಸಾಮಾಗ್ರಿ ವಶಕ್ಕೆ ಪಡೆದಿದ್ದು ಆತನಿಗೆ ಭಾರೀ ಹಿನ್ನೆಡೆ ಉಂಟುಮಾಡಿದೆ.
ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕಿಶ್ತ್ವಾರ್‌ನಲ್ಲಿ 12000 ಅಡಿ ಎತ್ತರದಲ್ಲಿರುವ ಈ ಅಡಗುತಾಣ ಕಾರ್ಗಿಲ್ ಶೈಲಿಯ ಬಂಕರ್ ಆಗಿತ್ತು. ಈ ಅಡಗುತಾಣವು ಸೈಫುಲ್ಲಾ ಮತ್ತು ಅವನ ಸಹಚರನನ್ನು ರಕ್ಷಿಸಿತ್ತು. ಭದ್ರತಾ ಪಡೆಗಳು ಇದರ ಮೇಲೆ ದಾಳಿ ಮಾಡಿದ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ. ಇದರಿಂದ ಹತಾಶನಾಗಿರುವ ಆತ ಅಪರೂಪಕ್ಕೆ ಅಡಗಿಕೊಂಡು ಹೊರಗೆ ಓಡಾಡುತ್ತಾನೆ ಎಂದು ವರದಿಯಾಗಿದೆ. ಇದರ ನಡುವೆ ಸೈಫುಲ್ಲಾ ಮತ್ತು ಇತರ ಭಯೋತ್ಪಾದಕರನ್ನು ಬಂಧಿಸಲು ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಜೈಶ್ ಕಮಾಂಡರ್‌ನ ಪ್ಲ್ಯಾನ್ ತಿಳಿದ ಬಳಿಕ ಆತನ ಎರಡು ಪೋಸ್ಟರ್‌ಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ, ಪೊಲೀಸರು ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆತನ ಸುಳಿವು ಸಿಕ್ಕರೆ ಮಾಹಿತಿಯನ್ನು ತಕ್ಷಣ ತಿಳಿಸುವಂತೆ ಸ್ಥಳೀಯರಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ರೇಪ್, ಓರ್ವನ ಹತ್ಯೆ ಕೇಸ್ – ಮೂವರಿಗೆ ಗಲ್ಲು ಶಿಕ್ಷೆ

