ಗಣಪತಿಯನ್ನು ಪೂಜಿಸುವಾಗ ಗರಿಕೆ ಅರ್ಪಿಸುವುದು ಶ್ರೇಷ್ಠ ಅದರಂತೆಯೇ ಶಿವ ಪೂಜೆಯಲ್ಲಿ ಬಿಲ್ವಪತ್ರೆ ಇರಲೇಬೇಕು. ಶಿವ ದೇವಾಲಯಗಳಲ್ಲಿ ಬಿಲ್ವಪತ್ರೆ ಗಿಡವನ್ನು ನೆಟ್ಟು ಬೆಳೆಸಲಾಗುತ್ತದೆ. ಈ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವಾಗ ಬಿಲ್ವಾಷ್ಟಕಂ ಸ್ತೋತ್ರ ಹೇಳಬೇಕು.
ಬಿಲ್ವಾಷ್ಟಕಂ ಶಿವನ ಆರಾಧನೆಯಲ್ಲಿ ಅತ್ಯಂತ ಪವಿತ್ರವಾದ ಸ್ತೋತ್ರವಾಗಿದೆ. ಇದು ತ್ರಿದಳ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವಾಗ ಪಠಿಸುವ ಮಂತ್ರವಾಗಿದೆ. ಇದು ಜನ್ಮಜನ್ಮಾಂತರದ ಪಾಪಗಳನ್ನು ನಾಶಪಡಿಸಿ, ಲಕ್ಷ್ಮಿ ಕೃಪೆ, ಜ್ಞಾನ ಮತ್ತು ಶಿವನ ಅನುಗ್ರಹವನ್ನು ಕರುಣಿಸುತ್ತದೆ. ಬಿಲ್ವ ವೃಕ್ಷದ ದರ್ಶನ ಮತ್ತು ಸ್ಪರ್ಶವು ಪಾಪನಾಶಕ ಎಂದು ಪರಿಗಣಿಸಲಾಗಿದೆ.

ಬಿಲ್ವಪತ್ರೆ ಅರ್ಪಿಸುವಾಗ ತೊಟ್ಟು ನಮ್ಮ ಕಡೆ, ಎಲೆಯ ತುದಿ ಶಿವಲಿಂಗದ ಕಡೆ ಇರುವಂತೆ ಅರ್ಪಿಸಬೇಕು, ಹೀಗೆ ಅರ್ಪಿಸುವುದರಿಂದ ಎಲೆತಟ್ಟುವಿನ ಮೂಲಕ ಶಿವತತ್ತ್ವ ಆ ಪರಿಸರದಲ್ಲಿ ಹರಡುತ್ತದೆ ಎಂಬ ನಂಬಿಕೆ ಇದೆ.
ಬಿಲ್ವಾಷ್ಟಕಂನ ಮಹತ್ವ
ಪಾಪ ವಿಮೋಚನೆ: ಬಿಲ್ವಾಷ್ಟಕಂ ಪಠಿಸುವುದರೊಂದಿಗೆ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದರಿಂದ, ಕೋಟಿ ಪೂಜೆಗಳನ್ನು ಮಾಡಿದ ಫಲ ಲಭಿಸುತ್ತದೆ ಮತ್ತು ಘೋರ ಪಾಪಗಳು ಕೂಡ ನಾಶವಾಗುತ್ತವೆ.
ತ್ರಿದಳದ ಸಂಕೇತ: ಬಿಲ್ವದ ಮೂರು ಎಲೆಗಳು ಶಿವನ ಮೂರು ಕಣ್ಣುಗಳು, ತ್ರಿಗುಣಗಳು, ಮತ್ತು ತ್ರಿಶೂಲವನ್ನು ಪ್ರತಿನಿಧಿಸುತ್ತವೆ. ಇದನ್ನು ಅರ್ಪಿಸುವುದು ಸಕಲ ದೇವತೆಗಳನ್ನು ಪೂಜಿಸಿದಂತೆಯೇ.

ಲಕ್ಷ್ಮಿ ಕೃಪೆ: ಬಿಲ್ವ ವೃಕ್ಷವು ಲಕ್ಷ್ಮಿ ದೇವಿಯ ತಪಸ್ಸಿನಿಂದ ಉದ್ಭವಿಸಿದೆ. ಆದ್ದರಿಂದ ಇದು ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತದೆ.
ಅಜ್ಞಾನ ನಾಶ: ಬಿಲ್ವಪತ್ರೆಯಿಂದ ಶಿವನನ್ನು ಆರಾಧಿಸುವುದರಿಂದ ಅಜ್ಞಾನ ಮತ್ತು ಮಾಯೆಯನ್ನು ಹೋಗಲಾಡಿಸಿ, ಮನಸ್ಸಿಗೆ ಶಾಂತಿ ಮತ್ತು ಜ್ಞಾನವನ್ನು ನೀಡುತ್ತದೆ.
ಆರೋಗ್ಯದಾಯಕ: ಬಿಲ್ವ ವೃಕ್ಷದ ಬೇರು, ಎಲೆ ಮತ್ತು ಹಣ್ಣುಗಳು ಆಯುರ್ವೇದದಲ್ಲಿ ಅತ್ಯಂತ ಮಹತ್ವದ ಔಷಧೀಯ ಗುಣಗಳನ್ನು ಹೊಂದಿವೆ.

