ಪ್ರೀತಿ ಮಧುರವಾದ ಭಾವನೆ. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಪ್ರತಿ ವರ್ಷ ಫೆಬ್ರವರಿ 14ರಂದು ವಿಶ್ವಾದ್ಯಂತ ಪ್ರೇಮಿಗಳ ದಿನವಾಗಿ ಸಂಭ್ರಮಿಸಲಾಗುತ್ತದೆ. ಈ ದಿನ ತಮ್ಮ ಇಷ್ಟದ ವ್ಯಕ್ತಿಯ ಜೊತೆಗೆ ಪ್ರೀತಿಯನ್ನು ವ್ಯಕ್ತಪಡಿಸಲಾಗುತ್ತದೆ. ಆದರೆ ಈ ದಿನವನ್ನು ಏಕೆ ಫೆಬ್ರವರಿ 14ರಂದೇ ಆಚರಿಸಲಾಗುತ್ತದೆ? ಇದರ ಇತಿಹಾಸವೇನು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ವ್ಯಾಲೆಂಟೈನ್ಸ್ ಡೇಯ ಇತಿಹಾಸ
ವ್ಯಾಲೆಂಟೈನ್ಸ್ ಡೇ ಕ್ರಿಸ್ತಪೂರ್ವ ಕಾಲದ ರೋಮನ್ ಸಂಸ್ಕೃತಿಗೆ ಸಂಬಂಧಿಸಿದೆ. ಪ್ರಾಚೀನ ರೋಮನ್ ಸಾಮ್ರಾಜ್ಯದಲ್ಲಿ ಫೆಬ್ರವರಿ 15ರಂದು ಲುಪರ್ಕಲಿಯಾ ಎಂಬ ಪ್ರೀತಿಯ ದೇವತೆಗೆ ಸಮರ್ಪಿತ ಹಬ್ಬವನ್ನಾಗಿ ಆಚರಿಸಲಾಗುತ್ತಿತ್ತು. ಈ ಹಬ್ಬವನ್ನು ಯುವಕ-ಯುವತಿಯರು ಜೋಡಿಗಳಾಗಿ ಆಚರಿಸುತ್ತಿದ್ದರು.

ಕ್ರಿ.ಶ. 496ರಲ್ಲಿ ಪೋಪ್ ಗೆಲೇಸಿಯಸ್ ಅವರು ಈ ಪೌರಾಣಿಕ ಹಬ್ಬವನ್ನು ಕ್ರೈಸ್ತ ಧರ್ಮದೊಂದಿಗೆ ಆಚರಣೆಗೆ ತಂದರು. ಸಂತ ವ್ಯಾಲೆಂಟೈನ್ ಅವರ ಸ್ಮರಣಾರ್ಥವಾಗಿ ಫೆಬ್ರವರಿ 14ರಂದು ಆಚರಣೆ ಮಾಡುವಂತೆ ಆದೇಶಿಸಿದರು. ಸಂತ ವ್ಯಾಲೆಂಟೈನ್ ಅವರ ಬಗ್ಗೆ ಎರಡು ಕತೆಗಳಿವೆ.
ರೋಮನ್ ಸಾಮ್ರಾಟ್ ಕ್ಲಾಡಿಯಸ್ ॥ ಸೈನಿಕರಿಗೆ ಮದುವೆಯಾಗುವುದನ್ನು ನಿಷೇಧಿಸಿದ್ದರು. ಆದರೆ ವ್ಯಾಲೆಂಟೈನ್ ಗುಪ್ತವಾಗಿ ಸೈನಿಕರ ಮದುವೆ ಮಾಡಿಸುತ್ತಿದ್ದರು. ಇದಕ್ಕಾಗಿ ಅವರನ್ನು ಶಿಕ್ಷಿಸಲಾಯಿತು. ಅಲ್ಲದೇ ಜೈಲಿನಲ್ಲಿದ್ದ ವ್ಯಾಲೆಂಟೈನ್ ಅವರು ಜೈಲರ್ ಪುತ್ರಿಯನ್ನು ಪ್ರೀತಿಸಿದರು ಮತ್ತು ಅವಳಿಗೆ ಪತ್ರವನ್ನೂ ಸಹ ಬರೆದಿದ್ದರು. ಮುಂದೆ ಅವರನ್ನು ಗಲ್ಲಿಗೇರಿಸಲಾಯಿತು. ಆ ದಿನದ ಸ್ಮರಣಾರ್ಥ ಫೆ.14 ರಂದು ವ್ಯಾಲೆಂಟೈನ್ಸ್ ಡೇ ಆಚರಣೆಗೆ ತರಲಾಯಿತು.

