ಚಿತ್ರದುರ್ಗ: ಸಾವಿರ ದಿನದಲ್ಲಿ ಸಾವಿರಾರು ಹಗರಣಗಳ ಸರಮಾಲೆ ಸಿಎಂ ಕುತ್ತಿಗೆಗೆ ಸುತ್ತಿಕೊಂಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಆರೋಪಿಸಿದ್ದಾರೆ.
ಚಿತ್ರದುರ್ಗದ (Chitradurga) ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ರಾಜ್ಯದಲ್ಲಿ ಜನವಿರೋಧಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸಿಎಂ ಸಿದ್ದರಾಮಯ್ಯರಿಂದ ಮುಡಾ ಹಗರಣ ನಡೆದಿದೆ. ಮುಡಾ ಹಗರಣದ ಮೂಲ ಪುರುಷ ಸಿದ್ದರಾಮಯ್ಯ ಆಗಿದ್ದು, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಣ ನುಂಗಿದ್ದಾರೆ. ಈ ವೇಳೆ ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ಸಲ್ಲಿಸಿ, ಜೈಲಿಗೆ ಹೋಗಿದ್ದರು. ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಹಗರಣ ನಡೆದಿದ್ದು, ಇನ್ಸ್‌ಪೆಕ್ಟರ್ ಸೇರಿ ವಿವಿಧ ಹುದ್ದೆಗಳಿಗೆ ಹಣ ಫಿಕ್ಸ್ ಮಾಡಿ, ಈ ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಷ್ಯಾದ ಸುದರ್ಶನ ಚಕ್ರಕ್ಕೆ ಬಲ – 288 ಎಸ್-400 ಕ್ಷಿಪಣಿ ಖರೀದಿಗೆ ಮುಂದಾದ ಭಾರತ
ಇನ್ನು ಗೃಹಲಕ್ಷ್ಮೀ ಹಣ ಕೊಡುವುದಾಗಿ ಹಣ ಲೂಟಿ ಹೊಡೆಯುತ್ತಿರುವ ಸರ್ಕಾರವು ಒಂದು ತಿಂಗಳ ಹಣ ನೀಡದೆ, ಅನ್ನಭಾಗ್ಯ ಹಣದಲ್ಲೂ ಲೂಟಿ ಹೊಡೆಯುತ್ತಿದೆ. ಈ ಬಗ್ಗೆ ಸಚಿವ ಕೆ.ಹೆಚ್ ಮುನಿಯಪ್ಪಗೆ ಕೇಳಿದ್ರೆ ನಾಳೆ ಬಾ ಅಂತಾರೆ. ರೈತರ ರಸಗೊಬ್ಬರ ಸಹ ಲೂಟಿ ಹೊಡೆಯುತ್ತಿದ್ದಾರೆ. ರಾಜ್ಯದಲ್ಲಿ ಲವ್ ಜಿಹಾದ್ ನಡೆಯುತ್ತಿದೆ, ಹೆಣ್ಣು ಮಕ್ಕಳ ಸಾವು ನಡೀತಿದೆ. ರಾಜ್ಯದಲ್ಲಿ ಬ್ಯಾಂಕ್‌ಗಳ ಲೂಟಿ ನಡೆಯುತ್ತಿದೆ. ಪೊಲೀಸರೇ ಕಳ್ಳರಾದರೆ ರಾಜ್ಯದಲ್ಲಿ ಯಾವ ಸ್ಥಿತಿಯಿದೆ. ಅಧಿಕಾರಿಗಳು ಕೆಲಸ ಮಾಡುವ ಮೂಡ್‌ನಲ್ಲಿಲ್ಲ. ಒತ್ತಡದಲ್ಲಿ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಕೆಲವರು ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗ್ತಿದ್ದು, ಸರ್ಕಾರದ ಕಿರುಕುಳದಿಂದ ಸಾವುಗೀಡಾದ ಅಧಿಕಾರಿಗಳ ಸಾವಿಗೆ ನ್ಯಾಯ ಸಿಕ್ಕಿಲ್ಲ. ಇದನ್ನು ಗೃಹ ಸಚಿವ ಪರಮೇಶ್ವರ್‌ಗೆ ಕೇಳಿದ್ರೆ ಗೊತ್ತಿಲ್ಲ ಅಂತಾರೆಂದು ಕಿಡಿಕಾರಿದ್ದಾರೆ.
ಈ ಕಾಂಗ್ರೆಸ್ ಸರ್ಕಾರಕ್ಕೆ ಮರಳು ದಂಧೆ ಎಟಿಎಂ ಆಗಿದ್ದು, ದೇವದುರ್ಗ ಜೆಡಿಎಸ್ ಶಾಸಕಿ ಮನಗೆ ನುಗ್ಗಿ ಗಲಾಟೆ ನಡೆಸಲಾಗಿದೆ. ಅಧಿಕಾರಿ ವರ್ಗ ಕಾಪಾಡಿ ಕಾಪಾಡಿ ಎಂಬ ಸ್ಥಿತಿಯಲ್ಲಿದೆ. ಆದ್ರೆ ಈ ಸರ್ಕಾರದಲ್ಲಿ ನಾನ್ ಸಿಎಂ, ನೀನ್ ಸಿಎಂ ಎಂದು ಇಬ್ಬರ ಜಗಳ ನಡೆದಿದೆ. ಇವ್ರೇ ಇರ್ತಾರಾ ನಾಳೆ ಹೋಗ್ತಾರಾ ಎಂಬ ಅತಂತ್ರ ಸ್ಥಿತಿಯಲ್ಲಿರುವ ಅಧಿಕಾರಿಗಳು ಲೂಟಿಗೆ ನಿಂತಿದ್ದಾರೆ. ನಾಳೆ ನಡೆಯುವ ಸಾವಿರ ದಿನದ ಕಾರ್ಯಕ್ರಮ ಸಹ ಲೂಟಿ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ಲೂಟಿ ಮಂತ್ರಿಗಳು ಬರ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿದ್ಧರಾಮಯ್ಯಗೆ ಲೂಟಿ ಹಣ ನೀಡುವರು. ಇದು ಅಲಿಬಾಬಾ ಮತ್ತು ಮೂವತ್ತು ಜನ ಕಳ್ಳರ ಸರ್ಕಾರವಾಗಿದೆ. ಇವರದ್ದು ಸಾವಿರ ದಿನದ ಸಾಧನೆ ಶೂನ್ಯ, ಬರೀ ಲೂಟಿ ಲೂಟಿ. ಹಾಗೆಯೇ ರಾಜ್ಯದ ನೀರಾವರಿ, ರಸ್ತೆಗಳಿಗೆ ಹಾಗೂ ರಸ್ತೆ ರಿಪೇರಿಗೆ ಈ ಸರ್ಕಾರ ಹಣ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ರೌಡಿಶೀಟರ್ ಕೊಲೆ ಕೇಸ್; ಬೈರತಿ ಬಸವರಾಜ್‌ಗೆ ಒಂದು ದಿನದ ರಿಲೀಫ್
ಬೆಂಗಳೂರಲ್ಲಿ ರಸ್ತೆ ಅಪಘಾತದಿಂದಲೇ ಅನೇಕರ ಸಾವಾಗಿದೆ. ಇನ್ನೂ ಸರ್ಕಾರದ ಖಜಾನೆ ಖಾಲಿ ಆಗಿದ್ದು, ಅಭಿವೃದ್ಧಿ ನಿಗಮಗಳಿಗೆ ಹಣವೇ ಬಿಡುಗಡೆ ಮಾಡಿಲ್ಲ. ಕೇವಲ ಸಾವಿರ ದಿನದಲ್ಲಿ ಸರ್ಕಾರ ದಿವಾಳಿ ಆಗಿದ್ದು, ಟೋಪಿ ಸರ್ಕಾರವು ಭಿಕ್ಷಾ ಪಾತ್ರೆ ಹಿಡಿದಿರುವ ಸರ್ಕಾರವಾಗಿದೆ. ಜಿಎಸ್‌ಟಿ ಬಗ್ಗೆ ಕಾಂಗ್ರೆಸ್‌ಗೆ ಜ್ಞಾನ ಇದ್ದರೆ ಶ್ವೇತ ಪತ್ರ ಹೊರಡಿಸಲಿ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ಅವಧಿಯಲ್ಲಿ ಬಂದ ಹಣ ಎಷ್ಟು? ಮೋದಿ ಅವಧಿಯಲ್ಲಿ ಬಂದ ಹಣ ಎಷ್ಟು? ಈಗ ರೈಲ್ವೆ, ಜಲಜೀವನ್ ಹಾಗೂ ಕೃಷಿ ಇಲಾಖೆಯಲ್ಲಿ ಬಂದ ಹಣ ಎಷ್ಟೆಂದು ಶ್ಬೇತಪತ್ರ ಹೊರಡಿಸಲಿ. ಒಂದು ವೇಳೆ ಬಿಜೆಪಿ ಅವಧಿಯಲ್ಲಿ ಕಡಿಮೆ ಆಗಿದ್ದರೆ ನಾವು ಕ್ಷಮೆ ಕೇಳುತ್ತೇವೆ. ಇಲ್ಲದಿದ್ದರೆ ಸಿಎಂ ಕ್ಷಮೆ ಕೇಳುತ್ತಾರೆಯೇ? ಎಂದು ತಿಳಿಸಿದ್ದಾರೆ.
ಬಿಜೆಪಿ ಸಂಸದರು ಕಡ್ಲೆಕಾಯಿ ತಿನ್ನುತ್ತಾರೆಯೇ? ಕಾಂಗ್ರೆಸ್ ಸಂಸದರು ಮಣ್ಣು ತಿನ್ನುತ್ತಿದ್ದಾರೆಯೇ? ಪ್ರಧಾನಿಯವರನ್ನು ಕಾಂಗ್ರೆಸ್ ಸಂಸದರು ಪ್ರಶ್ನೆ ಮಾಡಲಿ, ಲಬೊಲಬೊ ಎಂದು ಇಲ್ಲಿ ತಮಟೆ ಹೊಡೆಯುತ್ತಿದ್ದಾರಾ? ದೇಶದ ಪ್ರಧಾನಿ ಕರೆದ ಸಭೆ, ಜಿಎಸ್ಟಿ ಸಭೆ, ನೀತಿ ಆಯೋಗದ ಸಭೆಗೆ ಮಾತ್ರ `ಕೈ’ ನಾಯಕರು ಹೋಗಲ್ಲ. ಅವರಿಗೆ ಅಷ್ಟೊಂದು ಕಾಳಜಿ ಇದ್ದಿದ್ರೆ ಅಲ್ಲೇ ಹೋಗಿ ಕೇಳಬಹುದಿತ್ತಲ್ಲ ಎಂದು ಕಿಡಿಕಾರಿದ್ದಾರೆ.
ಆರ್‌ಸಿಬಿ ಒತ್ತಡಕ್ಕೆ ಮಣಿದು ಕ್ರಿಕೆಟ್ ಮ್ಯಾಚ್‌ಗೆ ಅವಕಾಶ ನೀಡ್ತಿದ್ದಾರೆ. ಹೆಚ್ಚು ಕಡಿಮೆ ಆದರೆ ಸರ್ಕಾರವೇ ನೇರ ಕಾರಣವಾಗಲಿದ್ದು, ಆರ್‌ಸಿಬಿಯ ದುಡ್ಡಿನ ಲಾಬಿಗೆ ಸರ್ಕಾರ ಮಣಿದಿದೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಫಿಲ್ಮ್ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ

